ಮಂಗಳೂರು: ಇದೇನ್ ವನಗಳ ನಡುವಿರೋ ಮನೆಯೋ ಇಲ್ಲ, ಮನೆಯ ಸುತ್ತಲೂ ಇರೋ ಕಾಡೋ ಏನೋ.. ಆದರೂ ಕಣ್ಣಿಗೆ ಹಚ್ಚ ಹಸಿರಾಗಿದೆ. ಈ ಹಸಿರನ್ನೇ ಉಸಿರಾಗಿಸಿಕೊಂಡು ಇಷ್ಟೊಂದು ಕಾಳಜಿಯಿಂದ ಇವರು ಗಿಡ-ಮರ-ಬಳ್ಳಿಗಳ ಬೆಳೆಸಿ, ಉಳಿಸಿದ್ದಾರೆ. ಇಂಥ ಹಸಿರ ಪ್ರೇಮಿಯ ಹೆಸರು ಕೃಷ್ಣ ಗೋವಿಂದ. ಮಂಗಳೂರಿನ ಪರಿಸರ ಪ್ರೇಮಿ ಕೃಷ್ಣ ತಮ್ಮ 4.5 ಸೆಂಟ್ಸ್ ಜಾಗದಲ್ಲಿ ಮೂರುವರೆ ಸೆಂಟ್ಸ್‌ನಲ್ಲಿ ದೊಡ್ಡ ಮನೆ ನಿರ್ಮಿಸಿದ್ದಾರೆ. ಉಳಿದಿರೋ ಅಲ್ಪಸ್ವಲ್ಪ ಸ್ಥಳದಲ್ಲೇ 300ಕ್ಕೂ ಅಧಿಕ ಪ್ರಬೇಧಗಳ ಗಿಡ-ಮರ-ಬಳ್ಳಿಗಳನ್ನು ಬೆಳೆಸಿ ಮನೆಗೆ ಪೂರ್ತಿ ಹಸಿರು ಹೊದಿಕೆ ನಿರ್ಮಾಣ ಮಾಡಿದ್ದಾರೆ.
ಈ ಮನೆಯ ನೆಲದಿಂದ ಮೇಲಿನಂತಸ್ತಿನವರೆಗೂ ಮರ-ಗಿಡ, ಬಳ್ಳಿಗಳು ಬೆಳೆದು ಹಸಿರು ಹೊದಿಕೆ ನಿರ್ಮಿಸಿವೆ. ನಗರದ ಕೋಡಿಕಲ್‌ನ ಕೃಷ್ಣ ತಾವೇ ಈ ಹಸಿರನ್ನ ಬೆಳೆಸಿರೋದು ವಿಶೇಷ. ಕುಂಡಲ, ಪೆಪ್ಸಿ ಬಾಟಲ್, ಬೇಡದ ಡಬ್ಬ, ಬಿದಿರಿನ ಕೊಳವೆ, ಪೆಯಿಂಟ್ ಬಕೆಟ್, ಕುಡಿದ ಸೀಯಾಳ ಎಲ್ಲದರಲ್ಲಿಯೂ ಗಿಡಗಳನ್ನು ನೆಟ್ಟು ಬೆಳೆಸಿದ್ದಾರೆ. ಸಣ್ಣ ಪೊದೆಯ ಸಸ್ಯಗಳಿಂದ ಹಿಡಿದು ದೊಡ್ಡದಾಗಿ ಬೆಳೆಯುವ ಬಳ್ಳಿಯಂತಹ ಎಲ್ಲ ಮಾದರಿಯ ಹಣ್ಣು, ಹೂ, ತರಕಾರಿ ಗಿಡಗಳು ಇಲ್ಲಿವೆ.
ಮೂಲತಃ ಕೇರಳದ ಕೃಷ್ಣ ಗೋವಿಂದರು ಹುಟ್ಟಿ ಬೆಳೆದಿರೋದು ಉಡುಪಿ ತಾಲೂಕಿನ ಕಾಪುವಿನಲ್ಲಿ. ಆದರೆ, ಕಳೆದ 35 ವರ್ಷಗಳಿಂದ ದೂರದ ಗುಜರಾತ್ನ ಸೂರತ್‌ನಲ್ಲಿ ಸ್ವಂತ ಉದ್ಯಮ ನಡೆಸುತ್ತಿದ್ದರು. ಬಳಿಕ ಸ್ವಯಂ ನಿವೃತ್ತಿ ಪಡೆದು ಇದೀಗ ಕೋಡಿಕಲ್‌ನಲ್ಲಿ ಪತ್ನಿಯೊಂದಿಗೆ ನೆಲೆಸಿದ್ದಾರೆ. ಸೂರತ್‌ನಲ್ಲಿಯೂ ಇದೇ ರೀತಿ ಗಿಡಮರಗಳನ್ನು ಬೆಳೆಸುತ್ತಿದ್ದ ಇವರು ಇದೀಗ ಈ ಮನೆಯಲ್ಲಿಯೂ ಅಷ್ಟೇ ಆಸಕ್ತಿಯಿಂದ ಸಸ್ಯಗಳನ್ನು ಬೆಳೆಸುತ್ತಿದ್ದಾರೆ. ಇಲ್ಲಿ ಬೆಳೆಯುವ ಹೂವಿನ ಮಕರಂದ ಹೀರಲು ಸಾಕಷ್ಟು ಚಿಟ್ಟೆಗಳು, ಹಣ್ಣುಗಳನ್ನು ತಿನ್ನಲು ವಿವಿಧ ಹಕ್ಕಿಗಳು ಇಲ್ಲಿಗೆ ಬರುತ್ತವೆ.
ಕಾಡಿಗೇ ನುಗ್ಗಿ ನರ ಮನುಷ್ಯ ಅಲ್ಲಿರೋ ಅಪರೂಪದ ವನ್ಯ ಸಂಪತ್ತು, ವನ್ಯಜೀವಿಗಳನ್ನ ನಾಶ ಮಾಡ್ತಿರುವಾಗ ಕೃಷ್ಣ ಗೋವಿಂದರು ಕಾಂಕ್ರೀಟ್ ಕಾಡಿನೊಳಗೆ ಸಸ್ಯ ಸಂಪತ್ತು ಬೆಳೆಸ್ತಿರೋದು ನಿಜಕ್ಕೂ ಬೆರಗು ಮೂಡಿಸುತ್ತೆ.