ಮಂಗಳೂರು: ಮರದ ಕಟ್ಟಿಗೆ ಸಾಗಿಸುತ್ತಿದ್ದ ಟೆಂಪೋವನ್ನು ಪ್ರಕರಣ ದಾಖಲಿಸದೆ ಬಿಡುಗಡೆ ಮಾಡಲು ವಾಹನದ ಮಾಲೀಕನಿಗೆ ಲಂಚದ ಆಮೀಷವೊಡ್ಡಿದ ಬಂಟ್ವಾಳ ತಾಲೂಕ್ ವೀರಕಂಬ ಫಾರೆಸ್ಟ್ ಗಾರ್ಡ್ ಮೇಲಿನ ಆರೋಪ ಸಾಬೀತಾಗಿದ್ದು, ಮಂಗಳೂರು ಲೋಕಾಯುಕ್ತ ವಿಶೇಷ ನ್ಯಾಯಾಲಯವು ಇದೀಗ ಶಿಕ್ಷೆ ವಿಧಿಸಿದೆ.
ಬಂಟ್ವಾಳ ತಾಲೂಕ್ ವೀರಕಂಬ ಫಾರೆಸ್ಟ್ ಗಾರ್ಡ್ ಆಗಿದ್ದ ಮನೋಜ್ ಶಿಕ್ಷೆಗೊಳಪಟ್ಟವರು. 2012 ಜುಲೈ 23 ರಂದು ಬಂಟ್ವಾಳ ತಾಲೂಕ ಬಾರೆಬೆಟ್ಟು ನಿವಾಸಿ ಮೊಹಮ್ಮದ್ ಮುಸ್ತಾಫ ಎಂಬವರಿಂದ ರೂ 5,000 ಲಂಚದ ಹಣಕ್ಕೆ ಬೇಡಿಕೆ ಇಟ್ಟು ಹಣ ಸ್ವೀಕರಿಸುತ್ತಿದ್ದಾಗ ಮಂಗಳೂರು ಲೋಕಾಯುಕ್ತ ನಿರೀಕ್ಷಕರಾದ ದಿಲೀಪ್ ಕುಮಾರ್ ಮತ್ತು ಸಿಬ್ಬಂದಿ ದಾಳಿ ಮಾಡಿ ಬಂಧಿಸಿದ್ದರು.
ವೀರಕಂಬದ ಆಗಿನ ಫಾರೆಸ್ಟ್ ಗಾರ್ಡ್ ಪ್ರಸ್ತುತ ಬಂಟ್ವಾಳ ತಾಲೂಕು ವಗ್ಗದಲ್ಲಿ ಫಾರೆಸ್ಟ್ ಗಾರ್ಡ್ ಆಗಿದ್ದಾರೆ. ವಿಚಾರಣೆ ನಡೆಸಿದ ಮಂಗಳೂರು ಲೋಕಾಯುಕ್ತ ವಿಶೇಷ ನ್ಯಾಯಾಲಯವು ವಿಶೇಷ ಸರ್ಕಾರಿ ಅಭಿಯೋಜಕ ಕೆ. ಎಸ್. ಎನ್. ರಾಜೇಶ್ ರವರ ವಾದವನ್ನು ಪುರಸ್ಕರಿಸಿ, ಆರೋಪಿಯ ಮೇಲಿನ ಆರೋಪ ಸಾಭೀತಾಗಿದೆ ಎಂದು ತೀರ್ಮಾನಕ್ಕೆ ಬಂದ ಹಿನ್ನಲೆಯಲ್ಲಿ ಆರೋಪಿಗೆ ಶಿಕ್ಷೆ ಪ್ರಕಟಿಸಲಾಗಿದೆ.
ಭ್ರಷ್ಟಾಚಾರ ನಿಗ್ರಹ ಖಾಯಿದೆಯ ಕಲಂ 7 ರ ಅಡಿ ಯಲ್ಲಿ ಎಸಗಿದ ಅಪರಾಧಕ್ಕೆ ಆರೋಪಿಗೆ 1 ವರ್ಷ ಸಾದಾ ಸಜೆ ಮತ್ತು 10,000/- ದಂಡ. ಕಲಂ 13 (1) (ಡಿ) ಯಲ್ಲಿ ಎಸಗಿದ ಅಪರಾಧಕ್ಕೆ 1 ವರ್ಷ ಸಾದಾ ಸಜೆ ಮತ್ತು 10,000/- ದಂಡ. ಆರೋಪಿ ದಂಡ ತೆರಲು ತಪ್ಪಿದಲ್ಲಿ 3 ತಿಂಗಳ ಸಾದಾ ಸಜೆ ಅನುಭವಿಸಬೇಕೆಂದು ಮೂರನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಬಿ. ಮುರಳಿಧರ ಪೈ ಅವರು ಶಿಕ್ಷೆ ಪ್ರಕಟಿಸಿದ್ದಾರೆ. ಮಂಗಳೂರು ಲೋಕಾಯುಕ್ತ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ, ನ್ಯಾಯವಾದಿ ಕೆ.ಎಸ್.ಎನ್. ರಾಜೇಶ್ ವಾದಿಸಿದ್ದರು.