ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ದಿನದಿಂದ ದಿನಕ್ಕೆ ಬಿರುಸು ಪಡೆಯುತ್ತಲೇ ಇದ್ದು, ಜಿಲ್ಲೆಯ ಜೀವನದಿ ನೇತ್ರಾವತಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಜೊತೆಗೆ ಕುಮಾರಧಾರ, ಗುಂಡ್ಯ ನದಿಗಳೂ ತುಂಬಿ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.
ನೇತ್ರಾವತಿ ನದಿ ತೀರದ ಪ್ರದೇಶಗಳಾದ ಉಪ್ಪಿನಂಗಡಿ ಹಾಗೂ ಬಂಟ್ವಾಳದ ಹಲವು ಮನೆಗಳಿಗೆ ನೀರು ನುಗ್ಗಿ, ಅವಾಂತರ ಸೃಷ್ಟಿಯಾಗಿದೆ. ಬಹುತೇಕ ನದಿತೀರದ ಪ್ರದೇಶಗಳೆಲ್ಲಾ ಜಲಾವೃತವಾಗಿದ್ದು, ರಾತ್ರಿ 11.30ಕ್ಕೆ ಬಂದ ಮಾಹಿತಿಯ ಪ್ರಕಾರ ಉಪ್ಪಿನಂಗಡಿಯ ರಥ ಬೀದಿಯ ಬಹುತೇಕ ಮನೆಗಳನ್ನು ಎತ್ತರದ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಆ ಭಾಗದ ಜನರು ಮನೆ ಬಿಟ್ಟು ಸಂತೃಸ್ತರ ಶಿಬಿರ ಅಥವಾ ತಮ್ಮ ಬಂಧು ಮಿತ್ರರ ಮನೆಗಳಲ್ಲಿ ಆಶ್ರಯ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿಯ ಗರಿಷ್ಠ ಮಟ್ಟ 31.5 ಮೀ. ಆದರೆ, ಇದು ರಾತ್ರಿ 10 ಗಂಟೆಯ ಸುಮಾರಿಗೆ ಅಪಾಯದ ಮಟ್ಟ ಮೀರಿ 31.9 ಮೀ ನದಿಯಲ್ಲಿ ನೀರು ಹರಿದಿದೆ. ಕುಮಾರಧಾರ ನದಿಯ ಅಪಾಯದ ಮಿತಿ 26.5 ಮೀ ಆಗಿದ್ದು, ಅದೂ ಕೂಡ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಧರ್ಮಸ್ಥಳದಲ್ಲಿ ಮಳೆಯ ಬಿರುಸು ಸ್ವಲ್ಪ ತಗ್ಗಿದ್ದು, ನೇತ್ರಾವತಿಯ ಪ್ರವಾಹದ ಭೀತಿಯೂ ಕಡಿಮೆಯಾಗಿದೆ. ಮಂಗಳೂರಿನಲ್ಲಿ ಮಳೆ ಬೆಳಗ್ಗೆಯೇ ಜೋರು ಪಡೆದಿದೆ.
ಚಾರ್ಮಾಡಿ ಘಾಟ್ ಹಾಗೂ ಶಿರಾಡಿ ಘಾಟ್ ರಸ್ತೆಗಳಲ್ಲಿ ಭಾರೀ ಭೂಕುಸಿತವಾದ್ದರಿಂದ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಸಂಪಾಜೆ ಘಾಟ್ ತೆರೆದಿದ್ದು, ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಭಾರೀ ಮಳೆಯ ಹಿನ್ನೆಲೆಯಲ್ಲಿ ಮುಂದಿನ 48 ಗಂಟೆಗಳ ಕಾಲ ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಸಾರ್ವಜನಿಕರು ಎಚ್ಚರ ವಹಿಸುವಂತೆ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸೂಚಿಸಿದ್ದಾರೆ.