ಮಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಭೀಕರ ಪ್ರವಾಹವು ದಕ್ಷಿಣ ಕನ್ನಡದ ಪುಣ್ಯಕ್ಷೇತ್ರಗಳ ಮೇಲೆ ದುಷ್ಪರಿಣಾಮ ಬೀರಿದೆ. ಪುಣ್ಯಕ್ಷೇತ್ರಗಳಾದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯಕ್ಕೆ ಬರುವ ಭಕ್ತರ ಸಂಖ್ಯೆಯಲ್ಲಿ ತೀವ್ರ ಇಳಿಮುಖವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಹ್ಮಣ್ಯಕ್ಕೆ ರಾಜ್ಯ, ಹೊರರಾಜ್ಯಗಳಿಂದ ಅಪಾರ ಭಕ್ತರು ಬರುತ್ತಾರೆ. ಆದರೆ, ಕೆಲವು ದಿನಗಳಿಂದ ಈ ಕ್ಷೇತ್ರಗಳಲ್ಲಿ ಭಕ್ತರ ಸಂಖ್ಯೆಯು ಕಡಿಮೆಯಾಗಿದೆ. ಪ್ರಮುಖವಾಗಿ ಉತ್ತರ ಕರ್ನಾಟಕದಲ್ಲಿ ಉಂಟಾದ ತೀವ್ರ ಪ್ರವಾಹದಿಂದ ಅಲ್ಲಿನ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ದಕ್ಷಿಣ ಕನ್ನಡವನ್ನು ಸಂಪರ್ಕಿಸುವ ಪ್ರಮುಖ ರಸ್ತೆ ಮಾರ್ಗಗಳಾದ ಚಾರ್ಮಾಡಿ ಘಾಟ್ ಒಂದು ತಿಂಗಳು ಮತ್ತು ಶಿರಾಡಿ ಘಾಟ್ ಕೆಲವು ದಿನ ಬಂದ್ ಆಗಿತ್ತು. ಅಲ್ಲದೆ, ರೈಲ್ವೆ ಸಂಪರ್ಕ ಕೂಡ ಕಡಿತಗೊಂಡಿರುವುದು ಭಕ್ತರ ಸಂಖ್ಯೆ ಇಳಿಮುಖವಾಗಲು ಕಾರಣವಾಗಿದೆ.
ಧರ್ಮಸ್ಥಳ ಮಂಜುನಾಥೇಶ್ವರನ ದರ್ಶನಕ್ಕೆ ಈ ಹಿಂದಿನಿಂದಲೂ ನಿತ್ಯ ಸರಿ ಸುಮಾರು 30 ಸಾವಿರಕ್ಕೂ ಅಧಿಕ ಭಕ್ತರು ಬರುತ್ತಿದ್ದರು. ಆದರೆ, ಈ ಸ್ಥಿತಿ ಹಾಗಿಲ್ಲ. ಸರತಿ ಸಾಲಿನಲ್ಲಿ ಹೆಚ್ಚು ಸಮಯ ನಿಲ್ಲದೇ ದೇವರ ದರ್ಶನಕ್ಕೆ ಹೋಗುವಷ್ಟರ ಮಟ್ಟಕ್ಕೆ ಭಕ್ತರ ಸಂಖ್ಯೆಯಲ್ಲಿ ಇಳಿಕೆಯಾಗಿದೆ.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲೂ ಕೂಡ ಹಿಂದೆ ಬರುತ್ತಿದ್ದಷ್ಟು ಭಕ್ತರು ಬರುತ್ತಿಲ್ಲ. ಸರ್ಪಸಂಸ್ಕಾರ ಸೇವೆಯನ್ನು ಮೊದಲೇ ನೋಂದಾಯಿಸಲಾಗುವುದರಿಂದ ಸುಮಾರು 2 ಸಾವಿರ ಭಕ್ತರು ಆ ಸೇವೆ ನೀಡಲು ಬರುತ್ತಿದ್ದಾರೆ. ಉತ್ತರ ಕರ್ನಾಟಕದ ಪ್ರವಾಹ ಸಂದರ್ಭದಲ್ಲಿ ತೀವ್ರ ಇಳಿಮುಖವಾಗಿದ್ದ ಭಕ್ತರ ಸಂಖ್ಯೆಯು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಚಾರ್ಮಾಡಿ ಘಾಟ್ ಸಂಚಾರಕ್ಕೆ ಮುಕ್ತವಾದ ಬಳಿಕ ಮತ್ತು ಅಸ್ತವ್ಯಸ್ತವಾದ ಜನರ ಜೀವನ ಸುಧಾರಿಸದ ಬಳಿಕ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪುಣ್ಯಕ್ಷೇತ್ರಗಳತ್ತ ಆಗಮಿಸುವ ಸಾಧ್ಯತೆಯಿದೆ.