ಮಂಗಳೂರು: ಮತದಾರರು ತಮ್ಮ ಮತಚೀಟಿಯನ್ನು ಪರಿಶೀಲಿಸಿ, ಲೋಪದೋಷಗಳಿದ್ದಲ್ಲಿ ಸರಿಪಡಿಸಲು ಅಕ್ಟೋಬರ್ 15 ಕಡೆಯ ದಿನ ಆಗಿದೆ. ಆದಷ್ಟು ಬೇಗ ಮತದಾರರು ತಮ್ಮ ಮತಚೀಟಿಯಲ್ಲಿರುವ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ ದೃಢೀಕರಿಸಬೇಕೆಂದು ದ.ಕ. ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಹೇಳಿದರು.
ತಮ್ಮ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಇಲ್ಲಿಯವರೆಗೆ 17,24458 ನಾಗರಿಕರಲ್ಲಿ 1,29 ಸಾವಿರ ಮಂದಿ ಮಾತ್ರ ಪರಿಶೀಲನೆ ನಡೆಸಿದ್ದಾರೆ. ಆದ್ದರಿಂದ ಆದಷ್ಟು ಬೇಗ ಎಲ್ಲಾ ಮತದಾರರೂ ತಮ್ಮ ಮತಚೀಟಿಯಲ್ಲಿನ ದಾಖಲೆಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ಲೋಪದೋಷಗಳಿದ್ದಲ್ಲಿ ಸೂಕ್ತ ದಾಖಲೆಗಳನ್ನು ನೀಡಿ ಸರಿಪಡಿಸಿಕೊಳ್ಳಲು ಆದೇಶ ಮಾಡಿದರು.
ನಾಗರಿಕರು ಮತದಾರರ ಸಹಾಯವಾಣಿ ಮೊಬೈಲ್ ಆ್ಯಪ್ (voter Helpline App) ಮೂಲಕ ತಮ್ಮ ಮನೆಯಲ್ಲಿಯೇ ಪರಿಶೀಲನೆ ನಡೆಸಬಹುದು. ವೆಬ್ ಪೋರ್ಟಲ್ www.nvsp.in ಮೂಲಕ, ಮತದಾರರ ಸಹಾಯವಾಣಿ 1950ಗೆ ಕರೆ ಮಾಡಿಯೂ ಪರಿಶೀಲನೆ ನಡೆಸಬಹುದು. ಅಲ್ಲದೆ ನಾಡಕಚೇರಿ, ತಮ್ಮ ವ್ಯಾಪ್ತಿಯ ಮತಗಟ್ಟೆ ಅಧಿಕಾರಿಗಳು, ಮತದಾರರ ನೋಂದಣಿ ಕಚೇರಿಗೂ ಆಗಮಿಸಿ ಪರಿಶೀಲನೆ ನಡೆಸಬಹುದು ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಡೆಂಗ್ಯು ದಾಖಲಾತಿಯಲ್ಲಿ ಇಳಿಕೆ: ಡಿಸಿ
ಡೆಂಗ್ಯು ನಿಯಂತ್ರಣಕ್ಕೆ ಬರದಿದ್ದರೂ, ದಾಖಲಾಗುವ ಪ್ರಮಾಣ ನಿಯಂತ್ರಣಕ್ಕೆ ಬಂದಿದೆ. ಡೆಂಗ್ಯು ದಾಖಲಾತಿಯನ್ನು ಬರೀ ಸರಕಾರಿ ವೈದ್ಯಕೀಯ ಇಲಾಖೆ ಮಾತ್ರವಲ್ಲದೇ ಎಲ್ಲಾ ಲ್ಯಾಬೋರೇಟರಿ ಗಳಿಂದಲೂ ದಿನವೂ ನಾವು ಮಾಹಿತಿ ಸಂಗ್ರಹ ಮಾಡುತ್ತಿದ್ದೇವೆ. ಈಗ ನಮ್ಮಲ್ಲಿರುವ ಮಾಹಿತಿ ಪ್ರಕಾರ ಡೆಂಗ್ಯು ದಾಖಲೆಯ ಪ್ರಮಾಣ ಬಹಳಷ್ಟು ಕಡಿಮೆಯಾಗಿದೆ. ಒಂದೇ ಬಾರಿ ಇದು ನಿಯಂತ್ರಣಕ್ಕೆ ಬರೋದಿಲ್ಲ. ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಲಾರ್ವಾ ಉತ್ಪತ್ತಿಯಾಗುದನ್ನು ತಡೆಯಲು ಜಿಲ್ಲಾಡಳಿತ ಸಾಕಷ್ಟು ಕ್ರಮ ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಹೇಳಿದರು.