ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಹಲವು ಮಂದಿಗೆ ಕೊರೊನಾ ಸೋಂಕು ತಗುಲಲು ಕಾರಣವಾದ ಮಂಗಳೂರಿನ ಫಸ್ಟ್ ನ್ಯೂರೋ ಖಾಸಗಿ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದ್ದು, ಅವರನ್ನು ಹೋಂ ಕ್ವಾರಂಟೈನ್ಗೆ ಕಳುಹಿಸಲಾಗಿದೆ.
ಆಸ್ಪತ್ರೆಯಿಂದ ಕೊರೊನಾ ಹರಡಿದ ಬಳಿಕ ಆಸ್ಪತ್ರೆಯನ್ನು ಸೀಲ್ ಡೌನ್ ಮಾಡಿ ಸಿಬ್ಬಂದಿ ಮತ್ತು ವೈದ್ಯರನ್ನು ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಆಸ್ಪತ್ರೆಯಲ್ಲಿದ್ದ ರೋಗಿಗಳನ್ನು ಬೇರೆ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಕ್ವಾರಂಟೈನ್ನಲ್ಲಿದ್ದ ಸಿಬ್ಬಂದಿಗೆ 14 ದಿನದ ಕ್ವಾರಂಟೈನ್ಗೆ ಒಳಪಡಿಸಲಾಗಿತ್ತು. ಬಳಿಕ ಅವರು ನಿಯಮದಂತೆ ಹೋಂ ಕ್ವಾರಂಟೈನ್ ಆಗಬೇಕಿತ್ತು. 14 ದಿನದ ಕ್ವಾರಂಟೈನ್ನಲ್ಲಿ ಆಸ್ಪತ್ರೆಯಲ್ಲಿದ್ದ ಸಿಬ್ಬಂದಿ ಮತ್ತು ವೈದ್ಯರ ಗಂಟಲು ದ್ರವದ ಮಾದರಿಗಳ ಪರೀಕ್ಷಾ ವರದಿ ವಿಳಂಬವಾಗಿ ಬಂದಿದ್ದರಿಂದ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲು ತಡವಾಗಿದೆ. ಆಸ್ಪತ್ರೆಯಲ್ಲಿ 22 ದಿನಗಳ ಕ್ವಾರಂಟೈನ್ ಪೂರೈಸಿರುವುದರಿಂದ ಇನ್ನು ಆರು ದಿನಗಳ ಕಾಲ ಹೋಂ ಕ್ವಾರಂಟೈನ್ ಪೂರೈಸಬೇಕಿದೆ.
ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿ ಹೋಂ ಕ್ವಾರಂಟೈನ್ ಹೋಗಿರುವುದರಿಂದ ಆಸ್ಪತ್ರೆ ಸಂಪೂರ್ಣ ಬಂದ್ ಆಗಿದೆ. 28 ದಿನದ ಅವಧಿ ಮುಗಿದ ಬಳಿಕ ಆಸ್ಪತ್ರೆಯನ್ನು ಸ್ಯಾನಿಟೈಸ್ ಮಾಡಿ ತೆರೆಯಲು ಅವಕಾಶವಿದೆ ಎಂದು ದ.ಕ ಜಿಲ್ಲಾ ಆರೋಗ್ಯಾಧಿಕಾರಿ ರಾಮಚಂದ್ರ ಬಾಯರಿ ತಿಳಿಸಿದ್ದಾರೆ.