ಪುತ್ತೂರು: ಮಳೆಯ ಆಟದ ನಡುವೆಯೇ ಸಾಂಪ್ರದಾಯಿಕ ಕೃಷಿಯಿಂದ ಜಿಲ್ಲೆಯ ಜನತೆ ಇದೀಗ ಯಾಂತ್ರೀಕೃತ ಕೃಷಿ ಚಟುವಟಿಕೆಗಳಿಗಳತ್ತ ಗಮನ ಹರಿಸಿದ್ದಾರೆ. ಅದರಲ್ಲೂ ವಿಶೇಷವಾಗಿ ಭತ್ತ ಬೆಳೆಯುವ ರೈತರಿಗೆ ಸರ್ಕಾರ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ `ಯಂತ್ರಧಾರಾ' ಆಪತ್ ಭಾಂದವನಾಗಿ ನೆರವು ನೀಡುತ್ತಿದೆ.
ಎತ್ತು ನೇಗಿಲುಗಳನ್ನೇ ನಂಬಿ ಬದುಕುತ್ತಿದ್ದ ಹಳ್ಳಿಯ ಕೃಷಿಕರ ಹೊಲ ಗದ್ದೆಗಳಲ್ಲಿ ಇಂದು ಯಂತ್ರಗಳದ್ದೇ ಭರಾಟೆ ಕೇಳಿಬರುತ್ತಿದೆ. ಗದ್ದೆಯ ಉಳುಮೆ, ನೇಜಿ ನಾಟಿಯಿಂದ ಹಿಡಿದು ಭತ್ತದ ಕೊಯ್ಲಿನ ತನಕ ಯಂತ್ರಗಳೇ ರೈತನಿಗೆ ಆಧಾರವಾಗುತ್ತಿದೆ.
ಕೃಷ್ಣಬೈರೇ ಗೌಡ ಅವರ ಕನಸು ಈ ಯಂತ್ರಧಾರಾ:
ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ಆಡಳಿತ ಕಾಲದಲ್ಲಿ ಕೃಷಿ ಸಚಿವರಾಗಿದ್ದ ಕೃಷ್ಣಬೈರೇಗೌಡ ಅವರ ಕನಸು ಯಂತ್ರಧಾರಾ ಕೇಂದ್ರಗಳು. ಹೋಬಳಿಗೊಂದರಂತೆ ಆರಂಭಿಸಲಾದ ಯಂತ್ರಧಾರಾ ಕೇಂದ್ರದಲ್ಲಿ ಕೃಷಿ ಚಟುವಟಿಕೆಗಳಿಗೆ ಪೂರಕವಾದ ಬಹುತೇಕ ಯಂತ್ರಗಳು ಲಭ್ಯವಿದೆ. ಈ ಯಂತ್ರಧಾರಾ ಕೇಂದ್ರಗಳ ಉಸ್ತುವಾರಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಸೇರಿದೆ. ಎಲ್ಲೋ ದೂರದಲ್ಲಿದ್ದ ಯಂತ್ರಗಳು ಈಗ ರೈತನ ಅಂಗಳಕ್ಕೆ ಬರುವಂತಾಗಿದೆ. ಹಳ್ಳಿಯಲ್ಲಿ ಕೃಷಿಕೂಲಿಕಾರರ ಕೊರತೆ ಕಾಡುತ್ತಿದ್ದು, ಅದರ ಬದಲಿಗೆ ಯಂತ್ರಗಳು ರೈತನ ಬದುಕಿನಲ್ಲಿ ಪ್ರಮುಖಪಾತ್ರ ವಹಿಸುತ್ತಿವೆ.
ಕಡಿಮೆಯಾಯ್ತು ರೈತನ ಶ್ರಮ ವಿನಿಯೋಗ ;
ಭತ್ತದ ಗದ್ದೆಗಳ ಉಳುಮೆಗೆ ಟ್ರ್ಯಾಕ್ಟರ್ , ನೇಜಿ ನಾಟಿಗೂ ಯಂತ್ರ, ಭತ್ತ ಪೈರು ಕಟಾವಿಗೂ ಹಾರ್ವೆಸ್ಟರ್ ಬಂದಿರುವ ಕಾರಣ ರೈತನ ಶ್ರಮ ವಿನಿಯೋಗ ಕಡಿಮೆಯಾಗಿದೆ. ಸಾಮಾನ್ಯವಾಗಿ ಶ್ರಮ ವಿನಿಮಯದ ಮೂಲಕ ರೈತ ಎರಡು ಎಕರೆ ಪ್ರದೇಶದಲ್ಲಿನ ಭತ್ತದ ಕೊಯ್ಲಿಗೆ ನೀಡಲಾಗುತ್ತಿರುವ ದಿನಗಳ ಬದಲಿಗೆ ಈಗ ಗಂಟೆಗಳ ಲೆಕ್ಕದಲ್ಲಿಯೇ ಯಂತ್ರಗಳ ಮೂಲಕ ಪೈರು ಕಟಾವು ಮಾಡುತ್ತಾನೆ.
ದುಬಾರಿ ಬಾಡಿಗೆ ರೈತನ ಸಮಸ್ಯೆ:
ಯಂತ್ರಧಾರಾ ಕೇಂದ್ರಗಳಿಂದ ಬಾಡಿಗೆ ಆಧಾರದಲ್ಲಿ ಯಂತ್ರಗಳನ್ನು ಬಳಕೆ ಮಾಡುವ ರೈತನಿಗೆ ಈ ಯಂತ್ರಗಳ ಬಾಡಿಗೆ ದರಕ್ಕಿಂತಲೂ ಅದರ ಸಾಗಣೆ ದರವೇ ದುಬಾರಿಯಾಗುತ್ತಿದೆ. ಸಾಮಾನ್ಯವಾಗಿ ಯಂತ್ರಧಾರಾ ಕೇಂದ್ರಗಳಿಂದ ಕಿಲೋಮೀಟರ್ ದೂರದ ಹಳ್ಳಿಗಳಿಗೆ ಈ ಯಂತ್ರಗಳನ್ನು ಟೆಂಪೋ ಅಥವಾ ಲಾರಿಗಳಲ್ಲಿ ಸಾಗಿಸಲಾಗುತ್ತದೆ. ನೇಜಿ ನಾಟಿ ಯಂತ್ರಗಳನ್ನು ಟೆಂಪೋ ಮೂಲಕ ಸಾಗಿಸಲಾದರೆ, ಭತ್ತದ ಕಟಾವು ಮಾಡುವ ಹಾರ್ವೆಸ್ಟರ್ ಯಂತ್ರಕ್ಕೆ ಲಾರಿಯೇ ಅನಿವಾರ್ಯವಾಗಿದೆ.