ಮಂಗಳೂರು: ಬರೋಬ್ಬರಿ 91 ವರ್ಷಗಳಿಂದ ಗಣಪನ ವಿಗ್ರಹ ಮಾಡುವ ಕಾರ್ಯದಲ್ಲಿ ಮಂಗಳೂರಿನ ಕುಟುಂಬವೊಂದು ತೊಡಗಿದ್ದು, ಇಂದು ಈ ಕುಟುಂಬದ ನಾಲ್ಕನೇ ತಲೆಮಾರು ವಿಗ್ರಹ ತಯಾರಿಕೆಯಲ್ಲಿ ತೊಡಗಿಸಿಕೊಂಡಿದೆ. ವಿಶೇಷವೆಂದರೆ ಈ ಕುಟುಂಬ ತಯಾರಿಸುವ ಗಣಪನ ವಿಗ್ರಹಕ್ಕೆ ಅಮೆರಿಕದಲ್ಲೂ ಬೇಡಿಕೆ ಇದೆ.
91 ವರ್ಷಗಳ ಹಿಂದೆ ಮೋಹನ್ ರಾವ್ ಎಂಬುವರು ಆಸಕ್ತಿಯಿಂದ ಗಣಪನ ಮೂರ್ತಿ ತಯಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಬಳಿಕ ಅವರ ನಾಲ್ವರು ಮಕ್ಕಳು ಈ ಮೂರ್ತಿ ತಯಾರಿಕೆಯನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ. ಇದೀಗ ಅವರ ಮಕ್ಕಳು, ಮೊಮ್ಮಕ್ಕಳು ಈ ಕಾರ್ಯಕ್ಕೆ ಕೈ ಜೋಡಿಸುತ್ತಿದ್ದಾರೆ.
ನಗರದ ಮಣ್ಣಗುಡ್ಡೆಯಲ್ಲಿರುವ ಈ ಕುಟುಂಬ ತಯಾರಿಸುವ ಗಣಪ ದೂರದ ಅಮೆರಿಕದ ಭಕ್ತರಿಂದಲೂ ಆರಾಧನೆಗೊಳ್ಳುತ್ತಾನೆ. ಅಮೆರಿಕದ ಕ್ಯಾಲಿಫೋರ್ನಿಯಾದ ಸ್ಯಾನ್ ಜೋಸ್ನಲ್ಲಿರುವ ಪ್ರಸನ್ನ ಗಣಪತಿ ದೇವಳದಲ್ಲಿ ನಡೆಯುವ ಗಣೇಶೋತ್ಸವದಲ್ಲಿ ಇಲ್ಲಿಂದ ಹೋದ ಗಣಪ ಪ್ರತಿಷ್ಠಾಪನೆಗೊಂಡು ಆರಾಧನೆಗೊಳ್ಳುತ್ತಾನೆ. ನಗರದ ಮುಲ್ಕಿಯ ಮೂಲದ ಪಾಂಡುರಂಗ ಶರ್ಮ ಎಂಬುವರು ಈ ಗಣಪನ ಮೂರ್ತಿಯನ್ನು ಆರಾಧನೆ ಮಾಡುತ್ತಿದ್ದು, 24 ವರ್ಷಗಳಿಂದಲೂ ಇಲ್ಲಿಂದಲೇ ಗಣಪನ ವಿಗ್ರಹವನ್ನು ಕೊಂಡೊಯ್ಯುತ್ತಿದ್ದಾರೆ.
ಕೊರೊನಾ ಸಂಕಷ್ಟದಿಂದ ವಿಮಾನಯಾನದ ತೊಂದರೆಯಾಗಿ ಈ ಬಾರಿ ಗಣಪನ ವಿಗ್ರಹ ಕೊಂಡೊಯ್ಯಲು ಬಹಳಷ್ಟು ಸಂಕಷ್ಟವಾಗಿತ್ತು. ಆದರೆ ಕೊನೆಯ ಗಳಿಗೆಯಲ್ಲಿ ಜುಲೈ ಕೊನೆಯ ವಾರದಲ್ಲಿ ವಂದೇ ಭಾರತ್ ಮಿಷನ್ ನಡಿಯಲ್ಲಿನ ವಿಮಾನದ ಮೂಲಕ ಪಾಂಡುರಂಗ ಶರ್ಮ ಅವರು ಇಲ್ಲಿಂದ ಗಣಪನ ವಿಗ್ರಹವನ್ನು ಕೊಂಡೊಯ್ದಿದ್ದಾರೆ. ಅಲ್ಲಿ ಈ ಗಣಪ ಒಂದು ವಾರಗಳ ಕಾಲ ಪ್ರಸನ್ನ ಗಣಪತಿ ದೇವಳದಲ್ಲಿ ಪೂಜಿಸಲ್ಪಟ್ಟು ಅದೇ ದೇವಳದಲ್ಲಿ ಜಲಸ್ತಂಭನಗೊಳ್ಳುತ್ತಾನೆ.
ಈ ಬಗ್ಗೆ ವಿಗ್ರಹ ತಯಾರಕ ರಾಮಚಂದ್ರ ರಾವ್ ಮಾತನಾಡಿ, ಪಾಂಡುರಂಗ ಶರ್ಮ ಅವರು ಪ್ರತೀ ವರ್ಷವೂ ನಮ್ಮಲ್ಲಿಂದಲೇ ಅಮೆರಿಕಕ್ಕೆ ಗಣಪನ ವಿಗ್ರಹ ಕೊಂಡೊಯ್ಯುತ್ತಾರೆ. ಆದರೆ ಈ ಬಾರಿ ಕೊರೊನಾ ಸಂಕಷ್ಟದಿಂದ ವಿಮಾನಯಾನದ ಸಮಸ್ಯೆಯಿಂದ ವಿಗ್ರಹ ಕೊಂಡೊಯ್ಯಲು ಸಮಸ್ಯೆಯಾಗಿತ್ತು. ಕೊನೆಯ ಪ್ರಯತ್ನವೆಂಬಂತೆ ಈ ಮೂರ್ತಿ ಜುಲೈ ಅಂತ್ಯಕ್ಕೆ ಅಮೆರಿಕ ತಲುಪಿದೆ ಎಂದು ಹೇಳಿದರು.