ಪುತ್ತೂರು : ಉಪ್ಪಿನಂಗಡಿ ಸರ್ಕಾರಿ ಕಾಲೇಜಿನಲ್ಲಿನ ಹಿಜಾಬ್ ಪ್ರತಿಭಟನೆ ವಿಚಾರವಾಗಿ ವರದಿ ಮಾಡಲು ತೆರಳಿದ್ದ ಪತ್ರಕರ್ತರ ವಿರುದ್ಧ ಸುಳ್ಳು ದೂರು ದಾಖಲಾಗಿದೆ. ಸತ್ಯಾಂಶ ತಿಳಿದುಕೊಳ್ಳದೆ ದೂರು ದಾಖಲಿಸಿಕೊಂಡಿರುವುದನ್ನು ಖಂಡಿಸುವುದಾಗಿ ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿಯ ಸ್ಥಾಪಕಾಧ್ಯಕ್ಷ ಬಿ.ಕೆ.ಸೇಸಪ್ಪ ಬೆದ್ರಕ್ಕಾಡು ಅವರು ತಿಳಿಸಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಧ್ಯಮವು ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿದೆ. ಹಿಜಾಬ್ ವಿಚಾರದಲ್ಲಿ ಶಾಲಾ ಮಕ್ಕಳು ಪ್ರತಿಭಟನೆ ನಡೆಸಿರುವುದನ್ನು ವರದಿ ಮಾಡಲು ತೆರಳಿರುವ ಮಾಧ್ಯಮ ಪ್ರತಿನಿಧಿಗಳಿಗೆ ಹಲ್ಲೆ ನಡೆಸಿ, ದಿಗ್ಭಂಧನ ವಿಧಿಸಿ, ವಿಡಿಯೋ ಡಿಲೀಟ್ ಮಾಡಿರುವುದು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ. ವರದಿ ಮಾಡುವುದು ಮಾಧ್ಯಮ ಪ್ರತಿನಿಧಿಗಳ ಕರ್ತವ್ಯ. ಅವರ ಮೇಲೆ ದೌರ್ಜನ್ಯ ಸರಿಯಲ್ಲ ಎಂದು ಹೇಳಿದ್ದಾರೆ.
ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕಾಲೇಜಿನಲ್ಲಿ ನಡೆದಿರುವ ಘಟನೆಯ ಕುರಿತು, ಕಾಲೇಜಿನಲ್ಲಿನ ಸಿಸಿ ಕ್ಯಾಮೆರಾ ದೃಶ್ಯಾವಳಿ, ಸ್ಥಳದಲ್ಲಿದ್ದ ಪೊಲೀಸರು ಚಿತ್ರೀಕರಿಸಿದ್ದ ದೃಶ್ಯಾವಳಿಗಳನ್ನು ಪರಿಶೀಲಿಸುವ ಜತೆಗೆ, ಕಾಲೇಜಿಗೆ ಸಂಬಂಧಪಟ್ಟವರ ಹೇಳಿಕೆಗಳನ್ನು ಪಡೆದುಕೊಂಡು ಸತ್ಯಾಸತ್ಯತೆಯನ್ನು ತಿಳಿದು ದೂರು ದಾಖಲಿಸಿಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ದಲಿತರ ಬಾಹುಗಳಲ್ಲಿ ಹರಿಯುತ್ತಿರುವುದು ದನದ ಮಾಂಸದ ರಕ್ತ : ಎಸ್ಡಿಪಿಐ ಮುಖಂಡನ ಹೇಳಿಕೆಗೆ ಖಂಡನೆ : ಮಂಗಳೂರಿನ ಕಣ್ಣೂರಿನಲ್ಲಿ ನಡೆದ ಎಸ್ಡಿಪಿಐ ಜನಾದೇಶ ಸಭೆಯಲ್ಲಿ ಎಸ್ಡಿಪಿಐ ಮುಖಂಡರೊಬ್ಬರು ದಲಿತರ ಬಾಹುಗಳಲ್ಲಿ ಹರಿಯುತ್ತಿರುವುದು ದನದ ಮಾಂಸ ಆಹಾರದ ರಕ್ತ ಎಂಬ ಹೇಳಿಕೆ ನೀಡಿದ್ದು, ಇದನ್ನು ನಾವು ಖಂಡಿಸುತ್ತೇವೆ. ಈ ಹೇಳಿಕೆ ನೀಡಿರುವ ಎಸ್ಡಿಪಿಐ ಮುಖಂಡರು ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಎಂದು ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿಯ ಸ್ಥಾಪಕಾಧ್ಯಕ್ಷ ಬಿ.ಕೆ.ಸೇಸಪ್ಪ ಬೆದ್ರಕ್ಕಾಡು ಮತ್ತು ತಾಲೂಕು ಘಟಕದ ಅಧ್ಯಕ್ಷ ಅಣ್ಣಪ್ಪ ಕಾರೆಕ್ಕಾಡು ಆಗ್ರಹಿಸಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂತಹ ಹೇಳಿಕೆಗಳನ್ನು ದನದ ಮಾಂಸ ತಿನ್ನದ ದಲಿತರು ಒಪ್ಪಲು ಸಾಧ್ಯವಿಲ್ಲ. ದಲಿತರು ಧಾರ್ಮಿಕ ವಿಚಾರದಲ್ಲಿ ತೊಡಗಿಸಿಕೊಂಡಿದ್ದು, ಯಾರೂ ಇಲ್ಲಿ ದನದ ಮಾಂಸ ಸೇವಿಸುವವರಿಲ್ಲ. ಹಾಗಾಗಿ, ಈ ಹೇಳಿಗೆ ನಮಗೆ ತುಂಬಾ ನೋವು ತಂದಿದೆ ಎಂದಿದ್ದಾರೆ. ಎಸ್ಡಿಪಿಐ ಸಂಘಟನೆಯವರು ಕೆಲ ವಿಚಾರಗಳಲ್ಲಿ ದಲಿತರ ಪರವಾಗಿ ಕೆಲಸ ಮಾಡಿದ್ದಾರೆ, ಮಾಡುತ್ತಿದ್ದಾರೆ. ಈ ಬಗ್ಗೆ ನಮಗೆ ಅಭಿಮಾನವಿದೆ.
ಬೆಳ್ತಂಗಡಿ ಯುವಕನ ಹತ್ಯೆ ವಿಚಾರದಲ್ಲಿ ನ್ಯಾಯ ಒದಗಿಸಲು ಶ್ರಮಿಸಿದ್ದಾರೆ. ಆದರೆ, ಇತ್ತೀಚೆಗೆ ಕನ್ಯಾನದ ದಲಿತ ಸಮುದಾಯದ ಅಪ್ರಾಪ್ತೆ ವಿದ್ಯಾರ್ಥಿನಿಯೊಬ್ಬಳ ಆತ್ಮಹತ್ಯೆ ವಿಚಾರದಲ್ಲಿ ಆರೋಪಿ ಮುಸ್ಲಿಂ ಸಮುದಾಯದವರೆಂಬ ಕಾರಣಕ್ಕಾಗಿ ಮಾತನಾಡದೆ ಇರುವುದನ್ನು ಗಮನಿಸಿದಾಗ ಎಸ್ಡಿಪಿಐ ತಾರತಮ್ಯ ಮಾಡುತ್ತಿರುವ ಬಗ್ಗೆ ಅನುಮಾನ ಉಂಟಾಗಿದೆ.
ದಲಿತರು ಯಾರ ಹಾಗೂ ಯಾವುದೇ ಪಕ್ಷದ ಗುಲಾಮರಲ್ಲ. ದಲಿತರು ಯಾವುದೇ ಪಕ್ಷದಲ್ಲಿ ತೊಡಗಿಸಿಕೊಂಡಿದ್ದರೂ ಗುಲಾಮರಾಗಿ ವರ್ತಿಸುವ ಕೆಲಸ ಮಾಡಬೇಡಿ ಎಂದು ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಯು.ವಿಟ್ಲ, ತಾಲೂಕು ಘಟಕದ ಉಪಾಧ್ಯಕ್ಷ ಮನೋಹರ್ ಕೋಡಿಜಾಲು ಮತ್ತಿತರರು ಉಪಸ್ಥಿತರಿದ್ದರು.