ಬೆಳ್ತಂಗಡಿ: ನವ ಬೆಳ್ತಂಗಡಿ ಕನಸು ಹೊತ್ತು ತಾಲೂಕಿಗೆ ರೂ.458 ಕೋಟಿ ವೆಚ್ಚದ ಕಾಮಗಾರಿಯನ್ನು ತಂದು ಅನುಷ್ಠಾನ ಮಾಡುತ್ತಿರುವ ಯುವ ಶಾಸಕ ಹರೀಶ್ ಪೂಂಜರವರ ಸಾಧನೆ ಎಲ್ಲರಿಗೂ ಅನುಕರಣೀಯ, ಅವರ ಬಗ್ಗೆ ಯಾವುದೇ ದಾಖಲೆಗಳಿಲ್ಲದೆ ಸುಳ್ಳು ಆರೋಪ ಮಾಡುತ್ತಿರುವ ಮಾಜಿ ಶಾಸಕ ವಸಂತ ಬಂಗೇರರಿಗೆ ಅವರ ಹಿರಿತನಕ್ಕೆ ಹಾಗೂ ಶಾಸಕತ್ವದ ಅನುಭವಕ್ಕೆ ಶೋಭೆಯಲ್ಲ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಹೇಳಿದರು.
ಅವರು ಆ.31ರಂದು ಬೆಳ್ತಂಗಡಿ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಈ ಹಿಂದಿನ ಶಾಸಕರ ಸಾಧನೆಗಳಿಗೆ ತುಲನೆ ಮಾಡಿದಾಗ ತಾಲೂಕಿನ ಜನತೆ ನೂತನ ಶಾಸಕರಿಗೆ ಅಭಿನಂದನೆ ಸಲ್ಲಿಸಲೇಬೇಕಾಗಿದೆ ಎಂದರು.
ಕಾಳಜಿ ರಿಲೀಫ್ ಫಂಡ್ ಲೆಕ್ಕ ಕೇಳಿದ್ದು ತಪ್ಪಲ್ಲ, ಶಾಸಕರು ದುರುಪಯೋಗ ಮಾಡಿದ್ದಾರೆ ಎಂದು ಹೇಳಿದ್ದು ಸರಿಯಲ್ಲ. ಇದು ಸರ್ವ ಧರ್ಮ, ಜಾತಿ ಪಕ್ಷ ಹೊರತುಪಡಿಸಿ ರಚಿತವಾದ ಸಮಿತಿಯಾಗಿದೆ. ನೆರೆಹಾನಿಯಿಂದ ಕಷ್ಟದಲ್ಲಿರುವವರಿಗೆ ಸ್ಪಂದಿಸಲು ತಾಲೂಕು ಮಟ್ಟದಲ್ಲಿ ರಚಿಸಿದ ಸಮಿತಿ, ಸಂಘ ಸಂಸ್ಥೆಗಳು ನೀಡಿದ ಹಣ ಸರಿಯಾಗಿ ಫಲಾನುಭವಿಗಳಿಗೆ ದೊರೆಯಬೇಕೆಂದು ಸಮಿತಿಯವರ ಇಚ್ಚೆ. ಇದರ ಲೆಕ್ಕ ಪತ್ರ ಪಾರದರ್ಶಕವಾಗಿದೆ ಇದನ್ನು ತಿಳಿದುಕೊಳ್ಳದೆ ಆರೋಪ ಮಾಡುವುದು ಸರಿಯೇ ಎಂದು ಪ್ರಶ್ನಿಸಿದರು.
ರಾಜಕೀಯ ಪಾಳೇಗಾರಿಕೆ ಮಾಡುವುದಿದ್ದರೆ ಅದಕ್ಕೆ ಉತ್ತರ ಕೊಡುವ ಶಕ್ತಿ ಬಿಜೆಪಿಗೆ ಹಾಗೂ ಶಾಸಕರಿಗೆ ಇದೆ. ಮಾಜಿ ಶಾಸಕರು ಕಿವಿ ಊದುವವರ ಬಗ್ಗೆ ಎಚ್ಚರ ವಹಿಸುವ ಅಗತ್ಯ ಇದೆ. ಲೆಕ್ಕ ಕೇಳುತ್ತಿರುವ ಕಾಂಗ್ರೆಸ್ಗೆ ಮುಂದಿನ ದಿನಗಳಲ್ಲಿ ತಾಲೂಕಿನ ಜನತೆಯೇ ಲೆಕ್ಕ ಚುಕ್ತಾ ಮಾಡಲಿದ್ದಾರೆ ಎಂದು ಮಾಜಿ ಶಾಸಕರಿಗೆ ಪರೋಕ್ಷವಾಗಿ ತಿರುಗೇಟು ನೀಡಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ರಾವ್ ಉಪಸ್ಥಿತರಿದ್ದರು.