ಮಂಗಳೂರು: ನಗರದಲ್ಲಿ ಭಾರಿ ವಂಚನೆ ಎಸಗಲು ಕೇಂದ್ರ ಸರ್ಕಾರದ ನ್ಯಾಷನಲ್ ಕ್ರಿಮಿನಲ್ ಇನ್ವೆಸ್ಟಿಗೇಶನ್ ಬ್ಯೂರೋ ಹೆಸರಿನಲ್ಲಿ ನಗರಕ್ಕೆ ಬಂದ ಎಂಟು ಜನರ ತಂಡವನ್ನು ಮಂಗಳೂರು ಕದ್ರಿ ಪೊಲೀಸರು ಬಂಧಿಸಿದ್ದಾರೆ ಎಂದು ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ತಿಳಿಸಿದ್ದಾರೆ.
ಮಂಗಳೂರಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಮಂಗಳೂರಲ್ಲಿ ದರೋಡೆ ಮಾಡುವ ಉದ್ದೇಶದಿಂದ ಈ ತಂಡ ನಗರಕ್ಕೆ ಬಂದಿದ್ದು, ಇಬ್ಬರು ಸ್ಥಳೀಯರು ಸೇರಿದಂತೆ ಎಂಟು ಮಂದಿಯನ್ನು ಬಂಧಿಸಲಾಗಿದೆ ಎಂದರು.
ಕೇರಳದ ಟಿ ಸ್ಯಾಮ್ ಪೀಟರ್ (53), ಬೆಂಗಳೂರಿನ ಟಿ.ಕೆ.ಬೋಪಣ್ಣ (33), ಮದನ್ (41), ಚಿನ್ನಪ್ಪ (38), ಸುನಿಲ್ ರಾಜು (35), ಕೋದಂಡರಾಮ (39), ಮಂಗಳೂರಿನ ಜಿ.ಮೊಯಿದ್ದಿನ್ (70) ಹಾಗೂ ಎಸ್.ಎ.ಕೆ.ಅಬ್ದುಲ್ ಲತೀಫ್ (59) ಬಂಧಿತರು.
ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಕಳೆದ ಕೆಲವು ದಿನಗಳಿಂದ ಮಂಗಳೂರಿನಲ್ಲಿ ವಿವಿಧೆಡೆ ತಪಾಸಣೆ ನಡೆಯುತ್ತಿದ್ದ ವೇಳೆ ಈ ಖದೀಮರು ಸಿಕ್ಕಿಬಿದ್ದಿದ್ದಾರೆ.
ಮಂಗಳೂರಿನ ಲಾಡ್ಜ್ ಒಂದರಲ್ಲಿ ಕಳೆದೆರಡು ದಿನಗಳಿಂದ ಇವರು ವಾಸ್ತವ್ಯ ಹೂಡಿದ್ದು, ಲಾಡ್ಜ್ ನೊಂದಣಿ ಪುಸ್ತಕದಲ್ಲಿಯೂ ಇವರು ತಮ್ಮ ರಿಜಿಸ್ಟರ್ ಮಾಡಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುವುದು ಆಯುಕ್ತರು ಹೇಳಿದರು.
ಇವರು ತಮ್ಮ ಕಾರಿನಲ್ಲಿ ಭಾರತ ಸರ್ಕಾರದ ನ್ಯಾಷನಲ್ ಕ್ರಿಮಿನಲ್ ಇನ್ವೆಸ್ಟಿಗೇಶನ್ ಬ್ಯೂರೋ ಎಂದು ಬೋರ್ಡ್ ಹಾಕಿಸಿಕೊಂಡಿದ್ದಾರೆ. ಇದರಲ್ಲಿ ಟಿ ಸ್ಯಾಮರ್ ಪೀಟರ್ ಅಧಿಕಾರಿಯಂತೆ, ಉಳಿದವರು ಆತನ ಗನ್ ಮ್ಯಾನ್ ಪಡೆಯ ಹಾಗೆ ಬಟ್ಟೆಗಳನ್ನು ಧರಿಸಿದ್ದರು. ಬಂಧಿತರಿಂದ 20 ಲಕ್ಷ ಮೌಲ್ಯದ ಎರಡು ಕಾರು, 1 ಪಿಸ್ತೂಲ್, ಎಂಟು ಸಜೀವ ಗುಂಡು, ಒಂದು ನಕಲಿ ಏರ್ ಗನ್ ಮತ್ತು 10 ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ ಎಂದರು.
ಟಿ.ಸ್ಯಾಮ್ ಪೀಟರ್ ಈ ತಂಡದ ಸೂತ್ರಧಾರಿಯಾಗಿದ್ದು, ಈತ ಕೇರಳದವನಾಗಿದ್ದಾನೆ. ಈತನಿಗೆ ಪಶ್ಚಿಮ ಬಂಗಾಳ, ಭುವನೇಶ್ವರ, ಮಣಿಪಾಲದ ಸಂಪರ್ಕವಿದ್ದು, ತನಿಖೆ ಮುಂದುವರಿದಿದೆ. ಈತ ಬೆಂಗಳೂರು ತಂಡದೊಂದಿಗೆ ಮಂಗಳೂರಿಗೆ ಬಂದಿದ್ದು, ಇವರ ಜೊತೆಗೆ ಬಂಧಿತರಾದ ಮಂಗಳೂರಿನ ಇಬ್ಬರನ್ನು ತನಿಖೆಗೆ ಒಳಪಡಿಸಿದ್ದೇವೆ ಎಂದು ಮಾಹಿತಿ ನೀಡಿದರು.
ವಂಚನೆ ಎಸಗಲು ಮಂಗಳೂರಿಗೆ ಬಂದಿದ್ದರು ಎಂಬುದು ಪ್ರಾಥಮಿಕ ವಿಚಾರಣೆಯಲ್ಲಿ ತಿಳಿದು ಬಂದಿದ್ದು, ಇನ್ನಷ್ಟು ತನಿಖೆ ನಡೆಸಲಾಗುವುದು. ಆರೋಪಿಗಳ ಮಾಹಿತಿ ಕಲೆ ಹಾಕಲು ಮೂರು ತಂಡ ಕಾರ್ಯನಿರ್ವಹಿಸಲಿವೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ತಿಳಿಸಿದ್ದಾರೆ.