ಸುಳ್ಯ : ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ಪೇಟೆಯಲ್ಲಿ ಖೋಟಾ ನೋಟು ಚಲಾವಣೆಯ ಪ್ರಯತ್ನ ನಡೆಯತೊಡಗಿದೆ ಎನ್ನಲಾಗಿದ್ದು, ಗುರುವಾರ ಬೆಳಿಗ್ಗೆ ಹೂವಿನ ವ್ಯಾಪಾರಿಯೊಬ್ಬರಿಗೆ ಅಪರಿಚಿತ ವ್ಯಕ್ತಿಯೊಬ್ಬ 200 ರೂಪಾಯಿಯ ಖೋಟಾ ನೀಡಿದ್ದಾರೆ ಎನ್ನಲಾದ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.
ಸುಳ್ಯ ಪೇಟೆಯಲ್ಲಿ ಹೂವಿನ ವ್ಯಾಪಾರ ಮಾಡುವ ಹಾಸನ ಜಿಲ್ಲೆ ಅರಕಲಗೂಡು ತಾಲೂಕು ಕೇರಳಾಪುರದ ಮೂರ್ತಿ ಎಂಬವರಿಗೆ 200 ರೂಪಾಯಿ ಮುಖ ಬೆಲೆಯ ನಕಲಿ ನೋಟು ನೀಡಿ, 20 ರೂಪಾಯಿಯ ಹೂ ಪಡೆದುಕೊಂಡು ಚಿಲ್ಲರೆ 180 ರೂಪಾಯಿ ತೆಗೆದುಕೊಂಡು ಹೋಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಮುಂಜಾನೆ 5.30 ವೇಳೆಗೆ ಆಗಿದ್ದರಿಂದ 200 ರೂ. ನೋಟನ್ನು ವ್ಯಾಪಾರಿ ಮೂರ್ತಿಯವರು ಸರಿಯಾಗಿ ಗಮನಿಸಿರಲಿಲ್ಲ. ಸ್ವಲ್ಪ ಹೊತ್ತು ಕಳೆದ ನಂತರ ಅನುಮಾನ ಬಂದು ನೋಟನ್ನು ಸಮೀಪದ ರಿಕ್ಷಾ ಚಾಲಕರಿಗೆ ತೋರಿಸಿದಾಗ, ಅವರು ಇದು ಖೋಟಾ ನೋಟು ಎಂಬವುದನ್ನು ಖಾತ್ರಿಪಡಿಸಿದ್ದಾರೆ. ಈ ಬಗ್ಗೆ ಸುಳ್ಯ ಪೊಲೀಸರೊಂದಿಗೆ ಈಟಿವಿ ಭಾರತ ಮಾಹಿತಿ ಕೇಳಿದ್ದು, ಖೋಟಾ ನೋಟು ಚಲಾವಣೆಯಾಗಿರುವ ಬಗ್ಗೆ ಇದುವರೆಗೆ ಯಾರೂ ದೂರು ನೀಡಿಲ್ಲ ಎಂದು ತಿಳಿಸಿದ್ದಾರೆ.