ಮಂಗಳೂರು: ಬಿಜೆಪಿ ರಾಜಕೀಯ ದುರುದ್ದೇಶ ಪ್ರೇರಿತವಾಗಿ ಕ್ರಿಶ್ಚಿಯನ್ ಸಮುದಾಯದ ಮೇಲೆ ಮತಾಂತರದ ಗೂಬೆ ಕೂರಿಸುತ್ತಿದೆ. ಈ ಮೂಲಕ ಬಹುಸಂಖ್ಯಾತರ ಮೇಲೆ ಅಲ್ಪಸಂಖ್ಯಾತ ಕ್ರಿಶ್ಚಿಯನ್ ಸಮುದಾಯದವರನ್ನು ಎತ್ತಿ ಕಟ್ಟುವ ಹುನ್ನಾರ ನಡೆಸುತ್ತಿದೆ ಎಂದು ಮಾಜಿ ಶಾಸಕ ಜೆ.ಆರ್.ಲೋಬೊ ಆರೋಪಿಸಿದ್ದಾರೆ.
ನಗರದ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ವಿಧಾನ ಮಂಡಲ ಸದನದ ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಇತ್ತೀಚೆಗೆ ಸಭೆ ನಡೆಸಿತ್ತು. ಈ ವೇಳೆ, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿನ ಕ್ರಿಶ್ಚಿಯನ್ ಸಮುದಾಯದ ಮಿಷನರಿಗಳು ಹಾಗೂ ಸಂಸ್ಥೆಗಳು ನಡೆಸುವ ಕಾರ್ಯ ಚಟುವಟಿಕೆಗಳ ಬಗ್ಗೆ ವರದಿ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ಮಾಡಿದೆ ಎಂದರು.
ಅದೇ ರೀತಿ ಭಾನುವಾರದ ದಿನ ಸಮಿತಿಯ ಸದಸ್ಯರು ಚರ್ಚ್ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕೆಂದು ಸೂಚನೆ ನೀಡಿದೆ. ಈ ಮೂಲಕ ಸಮಿತಿಯು ತನ್ನ ಕಾರ್ಯವ್ಯಾಪ್ತಿ ಹಾಗೂ ಇತಿಮಿತಿಗಳನ್ನು ಮೀರುತ್ತಿದ್ದು, ಭಾನುವಾರದ ದಿನಗಳಲ್ಲಿ ಚರ್ಚ್ಗಳಿಗೆ ಬರಲು ಎಲ್ಲರಿಗೂ ಮುಕ್ತ ಅವಕಾಶ ನೀಡಲಾಗುತ್ತಿದೆ. ಅಲ್ಲಿನ ಕಾರ್ಯ ಚಟುವಟಿಕೆಗಳನ್ನು ವೀಕ್ಷಿಸಬಹುದು.
ಒಂದು ವೇಳೆ ಕ್ರಿಶ್ಚಿಯನ್ ಸಮುದಾಯ ಮತಾಂತರ ಮಾಡಿದ್ದೇ ಆದಲ್ಲಿ ಕಾನೂನಿನಡಿ ಶಿಕ್ಷಿಸಲು ಅವಕಾಶವಿದೆ. ಅದು ಬಿಟ್ಟು ಬಿಜೆಪಿ ಅನಾವಶ್ಯಕ ಒಂದು ಸಮುದಾಯದ ವಿರುದ್ಧ ಅವಹೇಳನವಾಗಿ ಬಾಯಿ ಹರಿಯಬಿಡುವುದು ಬಿಜೆಪಿಗರಿಗೆ ಶೋಭೆ ತರುವ ಸಂಗತಿಯಲ್ಲ ಎಂದರು.
ಇದು ಒಂದು ಸಮುದಾಯವನ್ನು ಒಡೆದು ಆಳುವ ನೀತಿಯಾಗಿದ್ದು, ಈ ಮೂಲಕ ಬಿಜೆಪಿ ಹುನ್ನಾರ ನಡೆಸಿ ಸಮಾಜದ ಸ್ವಾಸ್ಥ್ಯ ಕೆಡಿಸುವ ಪ್ರಯತ್ನ ಮಾಡುತ್ತಿದೆ. ಇದು ರಾಜಕೀಯ ದುರುದ್ದೇಶ ಪೂರಿತವಾಗಿದ್ದು, ಜನರು ಈ ಮಾತಿಗೆ ಬಲಿ ಬೀಳಬಾರದು ಎಂದು ಹೇಳಿದರು.