ಮೂಡುಬಿದಿರೆ(ದಕ್ಷಿಣ ಕನ್ನಡ): ಮಾಜಿ ಸಚಿವ ಅಭಯಚಂದ್ರ ಅವರು ಲಾಕ್‌ಡೌನ್ ಸಮಯದಲ್ಲಿ ಕೋವಿಡ್ ವಾರಿಯರ್ಗಳ ಅಗತ್ಯ ಪ್ರಯಾಣಕ್ಕಾಗಿ ಎರಡೂವರೆ ತಿಂಗಳುಗಳ ಕಾಲ ತಮ್ಮ ಇನ್ನೋವಾ ಕಾರನ್ನು ಪೂರ್ಣಾವಧಿ ಚಾಲಕರೊಂದಿಗೆ ಇಂಧನ ಸಹಿತ ಒದಗಿಸಿಕೊಟ್ಟು ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಮೊದಲ ಹಂತದ ಕೋವಿಡ್-19 ಕಾಲದಲ್ಲಿ ಜಾರಿಯಲ್ಲಿದ್ದ ಲಾಕ್‌ಡೌನ್ ಸಮಯ ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರ ಮತ್ತು ಮೂಡುಬಿದಿರೆಯ ಜಿ.ವಿ. ಪೈ ಚಾರಿಟೇಬಲ್ ಆಸ್ಪತ್ರೆಯ ದಾದಿಯರು, ಆರೋಗ್ಯ ಸಹಾಯಕಿಯರು ಸೇರಿ 25 ಮಂದಿಗೆ ಅಭಯಚಂದ್ರ ಜೈನ್ ಅವರು ಕಾರು ಒದಗಿಸಿ ಅವರ ಪ್ರಯಾಣಕ್ಕೆ ಅನುಕೂಲ ಒದಗಿಸಿದ್ದರು. ಅದೇ ರೀತಿ ಈ ಬಾರಿಯೂ ಅಷ್ಟೇ ಮಂದಿಗೆ ಈ ಉಚಿತ ಸೇವೆಯನ್ನು ಒದಗಿಸಿ ಅನುಕೂಲ ಮಾಡಿಕೊಟ್ಟಿದ್ದಾರೆ.
ಮೂಡುಬಿದಿರೆ ಪರಿಸರದಲ್ಲಿ ಆರೋಗ್ಯ ಸೇವೆಯ ಉದ್ದೇಶದಿಂದ ಕರ್ತವ್ಯ ನಿರ್ವಹಿಸುತ್ತಿದ್ದ ವಾರಿಯರ್ಗಳು, ಲಾಕ್‌ಡೌನ್ ಅವಧಿಯಲಿ ಸಂಚಾರಕ್ಕೆ ವಾಹನಗಳಿಲ್ಲದೆ ಸಂಕಷ್ಟಕ್ಕೀಡಾಗಿದ್ದರು. ಅವರಿಗೆಲ್ಲ ಈ ಸೌಕರ್ಯ ಬಹಳ ಪ್ರಯೋಜನಕಾರಿಯಾಗಿತ್ತು. ಪರ್ಯಾಯವಾಗಿ ಅದೆಷ್ಟೋ ರೋಗಿಗಳಿಗೂ ಉತ್ತಮ ಸೇವೆ ಲಭಿಸುವಂತಾಗಿತ್ತು.
ಮೂರು ಶಿಫ್ಟ್ಗಳಲ್ಲಿ ಈ ಆರೋಗ್ಯ ಸಿಬ್ಬಂದಿಯನ್ನು ಅವರ ಮನೆಗಳಿಂದಲೇ ಕರೆದುಕೊಂಡು ಬಂದು ವಾಪಸ್ ಬಿಡುವ ಪ್ರಕ್ರಿಯೆ ನಿರಂತರವಾಗಿ ನಡೆದಿತ್ತು. ಮೂಡುಬಿದಿರೆ, ಪಾಲಡ್ಕ, ಕಡಂದಲೆ, ಶಿರ್ತಾಡಿ, ಬಂಟ್ವಾಳ ತಾಲೂಕಿನ ವೇಣೂರು, ವಾಮದಪದವು ಹೀಗೆ ಹತ್ತಾರು ಕಡೆಗಳಿಂದ ಆರೋಗ್ಯ ಸಿಬ್ಬಂದಿಯನ್ನು ಕರೆದುಕೊಂಡು ಬರುವ, ಶಿಫ್ಟ್ ಮುಗಿದಾಕ್ಷಣ ಅವರನ್ನು ವಾಪಾಸು ಮನೆಗೆ ತಲುಪಿಸುವ ಮಹತ್ತರವಾದ ಜವಾಬ್ದಾರಿಯ ಸೇವಾ ಪ್ರಕ್ರಿಯೆ ಇದಾಗಿತ್ತು.
ಸೋಮವಾರದಿಂದ ಖಾಸಗಿ ಬಸ್ಗಳ ಓಡಾಟ ಮತ್ತೆ ಪ್ರಾರಂಭವಾಗಿದ್ದು, ಹೀಗಾಗಿ ಈ ಸೌಲಭ್ಯವನ್ನು ನಿಲ್ಲಿಸಲಾಗಿದೆ. ಆದರೆ ಇಷ್ಟರವರೆಗೆ ನಿತ್ಯವೂ ಉಚಿತ ವಾಹನ ಸೇವೆ ನೀಡಿ ಉಪಕರಿಸಿದ ಅಭಯಚಂದ್ರ ಅವರಿಗೆ ಆರೋಗ್ಯ ಸಿಬ್ಬಂದಿ ಮನತುಂಬಿ ಕೃತಜ್ಞತೆ ಸಲ್ಲಿಸಿದ್ದಾರೆ.