ಕಡಬ: ಹಲವು ವರ್ಷಗಳಿಂದಲೂ ತಾಲೂಕಿನ ಬಿಳಿನೆಲೆ ಗ್ರಾಮದ ಜನರು ಸುಗಮವಾಗಿ ಸಂಚರಿಸಲು ನಿರ್ಮಿಸಬೇಕಾಗಿದ್ದ ಉದ್ಮಯ ಸೇತುವೆ ಕಾಮಗಾರಿ ಆರಂಭಿಸದ ಕುರಿತು ಈಚೆಗೆ 'ಈಟಿವಿ ಭಾರತ್' ಮಾಡಿದ್ದ ವರದಿಗೆ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡಿದ್ದಾರೆ.
'ಈಟಿವಿ ಭಾರತ್'ನಲ್ಲಿ ವರದಿ ಪ್ರಕಟವಾಗುತ್ತಿದ್ದಂತೆ ಅಂದಿನ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರು ಲೋಕೋಪಯೋಗಿ ಸಚಿವರಿಗೆ ಕೂಡಲೇ ಸೇತುವೆ ಕಾಮಗಾರಿ ಆರಂಭಿಸುವಂತೆ ಪತ್ರ ಬರೆದು ಮನವಿ ಮಾಡಿದ್ದರು. ಇದೀಗ ಸುಳ್ಯ ಶಾಸಕ ಎಸ್. ಅಂಗಾರ ಅವರಿಂದ ಭಾನುವಾರ ಶಾಲಾ ಸಂಪರ್ಕ ಸೇತುವೆ ಅನುದಾನದಡಿಯಲ್ಲಿ ಸೇತುವೆ ಕಾಮಗಾರಿಗೆ ಗುದ್ದಲಿ ಪೂಜೆ ನಡೆಯಿತು.
ಸೇತುವೆ ನಿರ್ಮಿಸದ ಕಾರಣ ಬಿಳಿನೆಲೆ ಗ್ರಾಮದ ಜನರು ಅನುಭವಿಸುತ್ತಿದ್ದ ಕಷ್ಟ ಅಷ್ಟಿಷ್ಟಲ್ಲ. ಇಲ್ಲಿರುವ ಭಾಗ್ಯ ಹೊಳೆ ದಾಟಲು ಕಾಲುಸಂಕವನ್ನೇ ಅವಲಂಬಿಸಬೇಕಾಗಿತ್ತು. ಸ್ವಲ್ಪ ಆಯತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಈಗ ಸೇತುವೆ ಕಾಮಗಾರಿಗೆ ಚಾಲನೆ ದೊರೆತಿರುವ ಕಾರಣ ಕೊನೆಗೂ ಹಲವು ವರ್ಷಗಳ ಹೋರಾಟಕ್ಕೆ ಪ್ರತಿಫಲ ಸಿಕ್ಕಿದೆ ಎಂದು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.
ಭಾಗ್ಯ ಹೊಳೆ ದಾಟಿದರೆ ಪುತ್ತಿಬೈಲು ಗ್ರಾಮ ಸಿಗುತ್ತೆ. ಇಲ್ಲಿ 40ಕ್ಕೂ ಹೆಚ್ಚು ಕುಟುಂಬಗಳು ಹಣ ಹೊಂದಿಸಿ ₹ 20 ಸಾವಿರ ವೆಚ್ಚದಲ್ಲಿ ಅಡಿಕೆ ಮರದ ಸೇತುವೆ ನಿರ್ಮಿಸುತ್ತಾರೆ. ಅಡಿಕೆ ಮರದ ಎರಡು ಭಾಗಗಳಿಗೆ ಕಬ್ಬಿಣದ ರೋಪ್ ಅಳವಡಿಸಿ ತೂಗು ಸೇತುವೆ ಮಾಡಿಕೊಂಡಿದ್ದರು. ಆದರೆ, ಇದನ್ನು ಪ್ರತಿ ವರ್ಷವೂ ಪುನರ್ ನಿರ್ಮಿಸಬೇಕಿತ್ತು. ಈ ಸೇತುವೆ ಮೇಲೆ ನಡೆಯುವುದು ಹೊಸಬರಿಗೆ ಕಷ್ಟವಾಗುತ್ತಿತ್ತು, ಸ್ವಲ್ಪವೇ ಆಯತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ.
ಭಾಗ್ಯ ಹೊಳೆಯಲ್ಲಿ ನೀರಿನ ಹರಿವು ಕಡಿಮೆಯಾದಾಗ ಮಾತ್ರ ವಾಹನಗಳು ದಾಟುತ್ತವೆ. ಹೊಳೆಯೆ ಅಡ್ಡಲಾಗಿ ಶಾಶ್ವತವಾದ ಸೇತುವೆ ನಿರ್ಮಿಸಿ ಎಂದು ದಶಕದಿಂದ ಇಲ್ಲಿನ ಜನರು ಆಗ್ರಹಿಸುತ್ತಲೇ ಇದ್ದರು. ಆದರೆ, ಜನಪ್ರತಿನಿಧಿ, ಅಧಿಕಾರಿಗಳು ಮಾತ್ರ ಜನರ ಬೇಡಿಕೆಗೆ ಕ್ಯಾರೇ ಎಂದಿರಲಿಲ್ಲ.
ಮೈತ್ರಿ ಸರ್ಕಾರ ಆಡಳಿತದಲ್ಲಿದ್ದ ಸಂದರ್ಭದಲ್ಲಿ ಅಪಾಯದ ತೂಗುಯ್ಯಾಲೆಯಲ್ಲಿ ಜನರ ಬದುಕು ಎಂದು 'ಈಟಿವಿ ಭಾರತ್' ವರದಿ ಪ್ರಕಟಿಸಿತ್ತು. ಸುದ್ದಿ ಪ್ರಕಟಗೊಂಡ ಕೆಲವೇ ಗಂಟೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಯು.ಟಿ. ಖಾದರ್ ಅವರು ಲೋಕೋಪಯೋಗಿ ಸಚಿವರಿಗೆ 'ಈಟಿವಿ ಭಾರತ್'ನಲ್ಲಿ ಪ್ರಕಟಗೊಂಡ ವರದಿ ಪ್ರಸ್ತಾಪಿಸಿ ಶೀಘ್ರ ಸೇತುವೆ ನಿರ್ಮಿಸುವಂತೆ ಕೋರಿದ್ದರು.
ಭಾನುವಾರ ಸೇತುವೆ ನಿರ್ಮಾಣದ ಕಾಮಗಾರಿಯ ಗುದ್ದಲಿ ಪೂಜೆ ನಡೆದಿದ್ದು, ಸರ್ವೆ, ನಕ್ಷೆ ಸೇರಿದಂತೆ ಎಲ್ಲಾ ದಾಖಲೆಗಳು ಪೂರ್ತಿಯಾಗಿವೆ. ಈ ಬಗ್ಗೆ ಸ್ಥಳೀಯ ನಿವಾಸಿಗಳು ಸಂತಸ ವ್ಯಕ್ತಪಡಿಸಿದ್ದು, 'ಈಟಿವಿ ಭಾರತ್'ಗೆ ಕೃತಜ್ಞತೆ ತಿಳಿಸಿದ್ದಾರೆ.