ಬೆಳ್ತಂಗಡಿ(ದಕ್ಷಿಣ ಕನ್ನಡ): ತಾಲೂಕಿನ ಚಾರ್ಮಾಡಿ ಹಾಗೂ ಮುಂಡಾಜೆ ಭಾಗಗಳಲ್ಲಿ ಆನೆಗಳ ಹಾವಳಿ ಹೆಚ್ಚಾಗಿದ್ದು, ಅಗಾಗ ಕೃಷಿ ಜಮೀನುಗಳಿಗೆ ನುಗ್ಗಿ ಬೆಳೆಗಳನ್ನು ಹಾನಿ ಮಾಡುತ್ತಿರುತ್ತವೆ. ಇದೀಗ ಚಾರ್ಮಾಡಿ ಪ್ರದೇಶದ ಮೃತ್ಯುಂಜಯ ನದಿಯಲ್ಲಿ ಕಳೆದ ಮೂರು ದಿನಗಳ ಹಿಂದೆ ಸಂಜೆ ಮೂರು ಗಂಟೆ ಸುಮಾರಿಗೆ ಹೊಸಮಠ ಪ್ರದೇಶದಲ್ಲಿ ಒಂಟಿ ಸಲಗವೊಂದು ಜಲವಿಹಾರ ನಡೆಸುವ ದೃಶ್ಯ ಕಂಡು ಬಂದಿದೆ.
ಸುಮಾರು ಅರ್ಧ ತಾಸಿಗಿಂತ ಅಧಿಕ ಹೊತ್ತು ನೀರಿನಲ್ಲಿ ಆಟ ಆಡಿದ ಆನೆ ಬಳಿಕ ನದಿಯ ಕೆಳಭಾಗದತ್ತ ತೆರಳಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ನಲ್ಲಿ ಚಿತ್ರೀಕರಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ. ಕಾಡಾನೆ ಚಾರ್ಮಾಡಿಯಲ್ಲಿ ಕಂಡುಬಂದ ದಿನ ರಾತ್ರಿ ಮುಂಡಾಜೆಯ ದುಂಬೆಟ್ಟುವಿನಲ್ಲಿ ತಿರುಗಾಟ ನಡೆಸಿತ್ತು. ಇದನ್ನು ಗಮನಿಸಿದ ಸ್ಥಳೀಯರು ಆನೆಯನ್ನು ಕಾಡಿಗಟ್ಟಲು ಹರಸಹಾಸ ಮಾಡಿದ್ದಾರೆ.
ಇನ್ನು, ಆನೆ ಜಲವಿಹಾರ ನಡೆಸಿರುವ ನದಿಯ ಒಂದು ಭಾಗದಲ್ಲಿ ಪವರ್ ಪ್ರಾಜೆಕ್ಟ್ ಕೋಕ್ಕೋ ಪ್ಲಾಂಟೇಶನ್ ಹಾಗೂ ಇನ್ನೊಂದು ಭಾಗದಲ್ಲಿ ಹೊಸಮಠ, ದೀವಾಜೆ, ಕೊರಂಗಾಯಿ ಮೊದಲಾದ ಜನವಸತಿ ಪ್ರದೇಶಗಳಿದ್ದು, ಇದೀಗ ಜನರಲ್ಲಿ ಆತಂಕ ಶುರುವಾಗಿದೆ.
ಇದನ್ನೂ ಓದಿ: ಸಕಲೇಶಪುರದಲ್ಲಿ ನಾಲ್ವರನ್ನು ಬಲಿ ಪಡೆದಿದ್ದ ಕಾಡಾನೆ ಮದ್ದೂರಲ್ಲಿ ಪ್ರತ್ಯಕ್ಷ : ಜನರ ಎದೆಯಲ್ಲಿ ಢವಢವ