ಸುಬ್ರಹ್ಮಣ್ಯ: ಕರ್ನಾಟಕದ ಪುಣ್ಯ ಕ್ಷೇತ್ರ ಕುಕ್ಕೆಸುಬ್ರಹ್ಮಣ್ಯದ ಚಂಪಾ ಷಷ್ಠಿ ಜಾತ್ರಾ ಮಹೋತ್ಸವದ ಚೌತಿಯ ದಿನವಾದ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ಎಡೆಸ್ನಾನ ಸೇವೆ ಮಾಡಿದರು.
ಗೋವುಗಳು ನ್ಯೆವೇದ್ಯ ಸೇವಿಸಿದ ಎಲೆಗಳ ಮೇಲೆ ಭಕ್ತರು ಉರುಳು ಸೇವೆ ನಡೆಸುವ ಮೂಲಕ ಚಂಪಾ ಷಷ್ಠಿಯ ಜಾತ್ರೋತ್ಸವದ ಎಡೆಸ್ನಾನ ಹರಕೆ ಸಲ್ಲಿಸಲಾಗುತ್ತದೆ.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಧ್ಯಾಹ್ನ ಮಹಾಪೂಜೆ ಬಳಿಕ ದೇವಳದ ಹೊರಾಂಗಣದ ಸುತ್ತ ಬಾಳೆ ಎಲೆಗಳನ್ನು ಹಾಕಿ ಅದರ ಮೇಲೆ ದೇವರ ನೈವೇದ್ಯಗಳನ್ನು ಬಡಿಸಲಾಯಿತು. ಬಳಿಕ ದೇವಸ್ಥಾನದ ಗೋವುಗಳು ಆ ಎಲೆಗಳಲ್ಲಿದ್ದ ಅನ್ನ ಪ್ರಸಾದವನ್ನು ಸೇವಿಸಿದವು. ಬಳಿಕ ದೇವಸ್ಥಾನದ ಎದುರಿನ ದರ್ಪಣತೀರ್ಥ ನದಿಯಲ್ಲಿ ಸ್ನಾನ ಮಾಡಿ ಬಂದ ಭಕ್ತರು, ಹಸುಗಳು ಸೇವಿಸಿ ಉಳಿದ ಅನ್ನ ಪ್ರಸಾದದ ಮೇಲೆ ಉರುಳು ಸೇವೆ ನಡೆಸಿದರು.
ಕುಕ್ಕೆಯಲ್ಲಿ ಜಾತ್ರೆಯ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ವ್ಯಾಪಾರಿಗಳು ವ್ಯಾಪಾರ ಸಿದ್ಧತೆಯಲ್ಲಿ ತೊಡಗುತ್ತಿರುವುದು ಕಂಡುಬಂತು. ಉರುಳು ಸೇವೆ ಸ್ಥಳದಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲು ಅರ್ಚಕರು, ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳು, ದೇವಾಲಯದ ಮೇಲುಸ್ತುವಾರಿ ಅಧಿಕಾರಿಗಳು ಸೇರಿದಂತೆ ಭಕ್ತರು, ಸಾರ್ವಜನಿಕರು ಉಪಸ್ಥಿತರಿದ್ದರು.