ಮಂಗಳೂರು: ಕಲ್ಲಡ್ಕದ ಪ್ರಭಾಕರ ಭಟ್ಟರ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಶಾಲಾ ಕ್ರೀಡೋತ್ಸವದಲ್ಲಿ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಬಾಬರಿ ಮಸೀದಿಯ ಪ್ರತಿಕೃತಿ ಕೆಡವಿ ಹಾಕಲಾಗಿದೆ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತಿದ್ದೇವೆ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದರು.
ಸಣ್ಣ ಮಕ್ಕಳ ಕೈಯಲ್ಲಿ ಬಾಬರಿ ಮಸೀದಿಯನ್ನು ಒಡೆದು ಹಾಕಿಸೋದು ಘನ ಕಾರ್ಯವೆಂದು ಭಾವಿಸಿದ್ದೀರಾ? ಸುಪ್ರೀಂಕೋರ್ಟ್ ಮೊನ್ನೆ ತೀರ್ಪು ನೀಡುವಾಗಲೂ ಬಾಬರಿ ಮಸೀದಿ ಒಡೆದಿರೋದು ತಪ್ಪು ಎಂದು ಛೀಮಾರಿ ಹಾಕಿದೆ ಎಂದರು. ಆ ತಕ್ಷಣ ಕಲ್ಲಡ್ಕ ಪ್ರಭಾಕರ ಭಟ್ಟರು ಹಾಗೂ ಅವರ ಶಾಲಾ ಆಡಳಿತ ಮಂಡಳಿಯ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಬೇಕಿತ್ತು. ಆದರೆ, ದುರಂತವೆಂದರೆ ಆಘಟನೆಗೆ ಸಾಕ್ಷಿಯಾಗಿ ಒಂದು ರಾಜ್ಯದ ಗವರ್ನರ್ ಆಗಿರುವ ಕಿರಣ್ ಬೇಡಿ, ಕೇಂದ್ರದ ಕ್ಯಾಬಿನೆಟ್ ಸಚಿವ ಸದಾನಂದ ಗೌಡ, ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಸದಸ್ಯರಾದ ಭೋಜೇಗೌಡ, ಇತರ ಶಾಸಕರು ಇದ್ದರು.
ಅಲ್ಲದೆ ಇಂತಹ ಪ್ರಕರಣಗಳಾದ ಸಂದರ್ಭದಲ್ಲಿ ಕೇಸು ದಾಖಲಿಸಬೇಕಾದ ದ.ಕ.ಜಿಲ್ಲಾ ಎಸ್ಪಿ ಲಕ್ಷ್ಮಿಪ್ರಸಾದ್ ಇದ್ದರು. ಇನ್ನೂ ಇಬ್ಬರು ಐಪಿಎಸ್ ಅಧಿಕಾರಿಗಳು ವೇದಿಕೆಯಲ್ಲಿದ್ದರು. ಆದರೆ, ಯಾರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ಭಾರತ ದೇಶ ಎದುರಿಸುತ್ತಿರುವ ಸವಾಲು. ಈ ಬಗ್ಗೆ ದ.ಕ.ಜಿಲ್ಲಾ ಎಸ್ಪಿಯವರು ಉತ್ತರ ನೀಡಬೇಕಾಗಿದೆ. ಕೋಮು ಪ್ರಚೋದನೆ ನೀಡುವ ದೃಶ್ಯವನ್ನು ಮಕ್ಕಳ ಕೈಯಲ್ಲಿ ಮಾಡಿಸುತ್ತಿರುವಾಗ ಯಾಕೆ ತಾವು ಕ್ರಮಕೈಗೊಂಡಿಲ್ಲ.
ಮುಖ್ಯಮಂತ್ರಿ ಯಡಿಯೂರಪ್ಪನವರು ಇದಕ್ಕೆ ಉತ್ತರ ನೀಡಬೇಕು. ಕರ್ನಾಟಕ ರಾಜ್ಯ ಸಂವಿಧಾನವನ್ನು ಮರೆತು ಕೋಮುವಾದಿ ಸಿದ್ದಾಂತ ಅನುಸರಿಸುತ್ತಿದೆ. ಯಾವ ಕಾರಣಕ್ಕೂ ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಮುನೀರ್ ಕಾಟಿಪಳ್ಳ ಆಕ್ರೋಶ ವ್ಯಕ್ತಪಡಿಸಿದರು.