ಪುತ್ತೂರು : ಕಾಂಗ್ರೆಸ್ ಪಕ್ಷ ದೇಶದಲ್ಲಿ ನೀರಿನಿಂದ ತೆಗೆದ ಮೀನಿನಂತೆ ವರ್ತಿಸುತ್ತಿದೆ. ಎಲ್ಲಾ ವಿಚಾರದಲ್ಲೂ ವಿರೋಧಿಸುತ್ತಿದೆ ಎಂದು ಕೇಂದ್ರ ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ ಆರೋಪಿಸಿದ್ದಾರೆ.
ಪುತ್ತೂರಿನಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಜಾರಿಗೆ ತಂದ ರೈತ ಮಸೂದೆಯನ್ನು ಇದೀಗ ಪ್ರತಿಪಕ್ಷಗಳು ವಿರೋಧಿಸುತ್ತಿವೆ. ಇದರ ಹಿಂದೆ ರಾಜಕಾರಣವಿರುವುದು ರೈತರಿಗೆ ಅರಿವಿದೆ. ರೈತ ಮಸೂದೆ ಜಾರಿಗೆ ತರುವ ಮೊದಲು ನೀತಿ ಆಯೋಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿದೆ.
ಎಲ್ಲಾ ಮುಖ್ಯಮಂತ್ರಿಗಳ ಒಪ್ಪಿಗೆ ಮೇರೆಗೆ ಈ ಕಾಯ್ದೆಯನ್ನು ಮೊದಲು ಸಾರ್ವಜನಿಕರ ಮುಂದೆ ಇಡಲಾಗಿದೆ. ಬಳಿಕವೇ ಎರಡೂ ಸದನಗಳಲ್ಲಿ ಚರ್ಚಿಸಿ ಜಾರಿಗೆ ತರಲಾಗಿದೆ. ವಿಪಕ್ಷಗಳು ರೈತರ ಪರ ನಿಲ್ಲದೆ, ದಳ್ಳಾಳಿಗಳ ಪರ ನಿಲ್ಲುವ ಮೂಲಕ ರೈತರನ್ನ ವಂಚಿಸುತ್ತಿವೆ ಎಂದರು.
ಕೇಂದ್ರ ಸರ್ಕಾರ ರೈತರು ಸ್ವಾವಲಂಬಿಯಾಗಿ, ಸ್ವಾತಂತ್ರ್ಯದಿಂದ ಬದುಕುವಂತೆ ಮಾಡಲು ಎಲ್ಲಾ ವ್ಯವಸ್ಥೆಗಳನ್ನು ರೂಪಿಸಿದೆ. ಪ್ರಣಾಳಿಕೆಯಲ್ಲಿ ಹೇಳಿದ ಆರ್ಟಿಕಲ್ 370, ರಾಮಜನ್ಮಭೂಮಿ, ತ್ರಿಪಲ್ ತಲಾಕ್ ಸೇರಿ ಎಲ್ಲಾ ಆಶ್ವಾಸನೆಗಳನ್ನು ಈಗಾಗಲೇ ಈಡೇರಿಸಿದೆ. ಉಳಿದಿರುವುದು ಏಕರೂಪ ನಾಗರಿಕ ಸಂಹಿತೆ. ಅದನ್ನೂ ಜಾರಿಗೆ ತರಲು ಎಲ್ಲಾ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ದೇಶ ಕೋವಿಡ್‌ನ ಸಂಕಷ್ಟ ಎದುರಿಸುತ್ತಿದ್ದ ಸಂದರ್ಭದಲ್ಲೂ ರೈತನಿಗೆ ರಸಗೊಬ್ಬರ ಸಮಸ್ಯೆ ಎದುರಾಗದಂತೆ ಕೇಂದ್ರ ಸರ್ಕಾರ ನೋಡಿದೆ ಎಂದು ಹೇಳಿದರು.
ಕೋವಿಡ್ ಸಮಯದಲ್ಲಿ ಅತೀ ಹೆಚ್ಚು ರಸಗೊಬ್ಬರದ ಬೇಡಿಕೆ ಬಂದಿದೆ. ಎಲ್ಲಾ ಬೇಡಿಕೆಯನ್ನೂ ಪೂರೈಸಲಾಗಿದೆ. ರಸಗೊಬ್ಬರದಲ್ಲೂ ಆತ್ಮನಿರ್ಭರ ಸಾಧಿಸುವ ನಿಟ್ಟಿನಲ್ಲಿ ದೇಶದಲ್ಲಿ ಮುಚ್ಚಲ್ಪಟ್ಟ ನಾಲ್ಕು ಬೃಹತ್ ರಸಗೊಬ್ಬರ ಕಾರ್ಖಾನೆಗಳನ್ನು ಮತ್ತೆ ಆರಂಭಿಸಲಾಗಿದೆ. ಈ ಮೂಲಕ ದೇಶದ ಕೃಷಿಕರಿಗೆ ಬೇಕಾದ ಶೇ. ಸುಮಾರು 70ರಷ್ಟು ರಸಗೊಬ್ಬರವನ್ನು ದೇಶದಲ್ಲೇ ತಯಾರಿಸಲಾಗುತ್ತಿದೆ.
ದೇಶದಲ್ಲಿ ರಸಗೊಬ್ಬರ ಕೊರತೆ ಸೃಷ್ಟಿಸುವ ಪ್ರಯತ್ನಗಳನ್ನೂ ದಾಸ್ತಾನುದಾರರು ಮಾಡಿದ್ದರು. ಆದರೆ, ಇದನ್ನು ತಕ್ಷಣಕ್ಕೆ ಪತ್ತೆಹಚ್ಚಲಾಗಿದೆ. ಕರ್ನಾಟಕದಲ್ಲಿ ಒಟ್ಟು 148 ಅಕ್ರಮ ದಾಸ್ತಾನುಗಾರರ ಪರವಾನಿಗೆ ರದ್ದುಗೊಳಿಸಲಾಗಿದೆ. ರಾಜ್ಯದಲ್ಲಿ ಈಗಲೂ 20 ಮಂದಿ ಅತೀ ಹೆಚ್ಚು ದಾಸ್ತಾನುಗಾರರ ಪಟ್ಟಿ ತಯಾರಿಸಲಾಗಿದೆ. ಎಲ್ಲಾ ಅಕ್ರಮಗಳನ್ನು ಮಟ್ಟ ಹಾಕುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿದೆ ಎಂದರು.