ಮಂಗಳೂರು: ನಗರಗಳು ಬೆಳೆದಂತೆ ತ್ಯಾಜ್ಯ ಉತ್ಪಾದನೆ ಕೂಡ ಹೆಚ್ಚುತ್ತಿದೆ. ಈ ತ್ಯಾಜ್ಯ ನಿರ್ವಹಣೆಯು ಮಂಗಳೂರು ಮಹಾನಗರ ಪಾಲಿಕೆಗೆ ದೊಡ್ಡ ಸವಾಲೇ ಆಗಿದೆ. ಹೌದು, ನಗರದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದ ಪ್ರಮಾಣದಷ್ಟು ಸಂಸ್ಕರಣಾ ಘಟಕ ಇಲ್ಲದಿರುವುದರಿಂದ ಇದೀಗ ಹೆಚ್ಚುವರಿಯಾಗಿ ಬರುತ್ತಿರುವ ತ್ಯಾಜ್ಯಗಳು ಲ್ಯಾಂಡ್ ಫಿಲ್ಲಿಂಗ್ ಆಗುತ್ತಿದೆ.
ಮಂಗಳೂರು ಮಹಾನಗರದಲ್ಲಿ ಮನೆ ಮನೆಯಿಂದ ತ್ಯಾಜ್ಯವನ್ನು ಹಸಿ ಮತ್ತು ಒಣ ಕಸಗಳನ್ನಾಗಿ ಬೇರ್ಪಡಿಸಿ ಸಂಗ್ರಹಿಸುವ ಕೆಲಸವನ್ನು ಪಾಲಿಕೆ ಮಾಡಿಸುತ್ತಿದೆ. ಆದ್ರೆ ನಗರದಲ್ಲಿ ಅಗಾಧ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತಿರುವ ಕಸವನ್ನು ವಿಲೇವಾರಿ ಮಾಡುವುದೇ ಬಹುದೊಡ್ಡ ಸಮಸ್ಯೆಯಾಗಿದೆ.
ಮಂಗಳೂರು ನಗರದಲ್ಲಿ 300 ರಿಂದ 350 ಟನ್ ಸಾಮರ್ಥ್ಯದ ಕಸದ ಜತೆಗೆ ಸುತ್ತಮುತ್ತಲಿನ ಪುರಸಭೆಗಳಿಂದ ಇನ್ನಷ್ಟು ತ್ಯಾಜ್ಯಗಳು ಬಂದು ಸೇರುತ್ತಿದೆ. ಮಂಗಳೂರಿನ ಪಚ್ಚನಾಡಿಯಲ್ಲಿ ಈ ತ್ಯಾಜ್ಯಗಳನ್ನು ಸಂಸ್ಕರಣೆ ಮಾಡುವ ವ್ಯವಸ್ಥೆ ಇದ್ದು, 150 ರಿಂದ 175 ಟನ್ ತ್ಯಾಜ್ಯವನ್ನಷ್ಟೇ ವಿಲೇವಾರಿ ಮಾಡುವ ಸಾಮರ್ಥ್ಯ ಇದೆ. ಸಾಮರ್ಥ್ಯಕ್ಕಿಂತ ಹೆಚ್ಚು ಬರುವ ತ್ಯಾಜ್ಯಗಳನ್ನು ಪಚ್ಚನಾಡಿಯಲ್ಲಿ ಲ್ಯಾಂಡ್ ಫಿಲ್ಲಿಂಗ್ ಮಾಡಲಾಗುತ್ತದೆ. ಪಚ್ಚನಾಡಿಯ ವಿಶಾಲವಾದ ಭೂಮಿಯಲ್ಲಿ, ಇಳಿಜಾರಿನಂತಿರುವ ಪ್ರದೇಶದಲ್ಲಿ ಲ್ಯಾಂಡ್ ಫಿಲ್ಲಿಂಗ್ ಮಾಡಿ ಮುಚ್ಚಲಾಗುತ್ತಿದೆ.
ಈ ಬಗ್ಗೆ ಈಟಿವಿ ಭಾರತದೊಂದಿಗೆ ಮಾತನಾಡಿದ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಪ್ರೇಮಾನಂದ ಶೆಟ್ಟಿ, ಇದೀಗ ಪಾಲಿಕೆಯಲ್ಲಿರುವ ಸಂಸ್ಕರಣಾ ಘಟಕದ ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರಮಾಣದ ತ್ಯಾಜ್ಯ ಉತ್ಪಾದನೆಯಾಗುತ್ತಿರುವುದರಿಂದ ಹೆಚ್ಚುವರಿ ತ್ಯಾಜ್ಯವನ್ನು ಲ್ಯಾಂಡ್ ಫಿಲ್ಲಿಂಗ್ ಮಾಡಲಾಗುತ್ತದೆ. ಇದೀಗ ಪಚ್ಚನಾಡಿಯ ಸಂಸ್ಕರಣಾ ಘಟಕವನ್ನು ಮೇಲ್ದರ್ಜೆಗೇರಿಸಲಾಗುತ್ತದೆ. ಈ ಹೊಸ ಪ್ಲ್ಯಾಂಟ್ನಲ್ಲಿ 420 ಟನ್ ತ್ಯಾಜ್ಯ ಸಂಸ್ಕರಣೆ ಮಾಡುವ ವ್ಯವಸ್ಥೆ ಇದೆ. ಇನ್ನೂ ಆರು ತಿಂಗಳಲ್ಲಿ ಈ ಪ್ಲ್ಯಾಂಟ್ ಕಾರ್ಯಾರಂಭವಾಗಲಿದ್ದು, ಬಳಿಕ ಈ ಸಮಸ್ಯೆ ಪರಿಹಾರಗೊಳ್ಳಲಿದೆ ಎಂದರು.
ಇದನ್ನೂ ಓದಿ: ಸಮಗ್ರ ಘನ ತ್ಯಾಜ್ಯ ನಿರ್ವಹಣೆಯಲ್ಲಿ ಹು-ಧಾ ಮಹಾನಗರ ಪಾಲಿಕೆ ಮಹತ್ವದ ಸಾಧನೆ
ಮಂಗಳೂರು ನಗರದಲ್ಲಿ ತ್ಯಾಜ್ಯ ಸಂಸ್ಕರಣೆ ಮಾಡುವ ಘಟಕದ ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರಮಾಣದ ತ್ಯಾಜ್ಯ ಉತ್ಪಾದನೆಯಾಗುತ್ತಿರುವುದರಿಂದ ಲ್ಯಾಂಡ್ ಫಿಲ್ಲಿಂಗ್ ಮಾಡಲಾಗುತ್ತಿದೆ. ನೂತನ ಘಟಕ ಆರಂಭವಾದರೆ ಈ ಸಮಸ್ಯೆ ಪರಿಹಾರಗೊಳ್ಳಲಿದೆ. ಇದರಿಂದಾಗಿ ಮಂಗಳೂರು ಮಹಾನಗರ ಪಾಲಿಕೆ ಮತ್ತು ಸ್ಥಳೀಯ ಜನರು ಪಡುವ ಸಮಸ್ಯೆಗೆ ಪರಿಹಾರ ಸಿಗಲಿದೆ.