ಮಂಗಳೂರು: ನೆರೆಹಾವಳಿಯಿಂದ ಸಾಕಷ್ಟು ಆಸ್ತಿ ನಷ್ಟವುಂಟಾಗಿರುವ ಹಿನ್ನೆಲೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಈ ಬಾರಿಯ ನವೆಂಬರ್ 15ರಿಂದ 17 ರವರೆಗೆ ವಿದ್ಯಾಗಿರಿಯಲ್ಲಿ ನಡೆಯಲಿದ್ದ ಆಳ್ವಾಸ್ ನುಡಿಸಿರಿ, ವಿರಾಸತ್ ಸಮ್ಮೇಳನಗಳನ್ನು ರದ್ದು ಪಡಿಸಲಾಗಿದೆ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ತಿಳಿಸಿದ್ದಾರೆ.
ಈ ಬಾರಿ ನವೆಂಬರ್ 15ರಿಂದ 17ರವರೆಗೆ ಆಳ್ವಾಸ್ ನುಡಿಸಿರಿ ಹಾಗು ವಿರಾಸತ್ ನಿಗದಿಯಾಗಿತ್ತು. 26 ವರ್ಷಗಳಿಂದ ಆಳ್ವಾಸ್ ವಿರಾಸತ್ ಮತ್ತು 15 ವರ್ಷಗಳಿಂದ ಆಳ್ವಾಸ್ ನುಡಿಸಿರಿಯನ್ನು ಸಂಸ್ಥೆ ವತಿಯಿಂದ ಆಚರಿಸಿಕೊಂಡು ಬಂದಿದ್ದೇವೆ. ಈ ವರ್ಷ ಆಳ್ವಾಸ್ ನುಡಿಸಿರಿ-ವಿರಾಸತ್ ಸಮ್ಮೇಳನಗಳನ್ನು ಒಟ್ಟಾಗಿ ನಡೆಸಲು ನಿರ್ಧರಿಸಿದ್ದು, ಸಿದ್ಧತೆಗಳು ಕೂಡ ಆರಂಭಗೊಂಡಿತ್ತು. ಆದರೆ ರಾಜ್ಯದಲ್ಲಿ ಉಂಟಾದ ಭಾರೀ ನೆರೆಹಾವಳಿಯಿಂದಾಗಿ ಸಾಕಷ್ಟು ಆಸ್ತಿ -ಪಾಸ್ತಿ ನಾಶವಾಗಿ ಸಾವಿರಾರು ಕುಟುಂಬಗಳ ಬದುಕು ಅತಂತ್ರ ಸ್ಥಿತಿಯಲ್ಲಿದೆ. ಈ ಸಂಕಷ್ಟದ ಸಂದರ್ಭದಲ್ಲಿ ನಾವು ಆಳ್ವಾಸ್ ನುಡಿಸಿರಿ-ವಿರಾಸತ್ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಂಭ್ರಮಿಸುವುದರಲ್ಲಿ ಅರ್ಥವಿಲ್ಲ ಎಂದು ಭಾವಿಸಿ ಈ ಎರಡೂ ಸಮ್ಮೇಳನವನ್ನು ಈ ಬಾರಿ ರದ್ದುಪಡಿಸಲಾಗಿದ್ದು 2020ಕ್ಕೆ ಮುಂದೂಡಲಾಗಿದೆ ಎಂದರು.
ನೆರೆ ಸಂತ್ರಸ್ತರಿಗೆ ಆರ್ಥಿಕ ಸಹಾಯ ನೀಡಿ ಅವರ ಕಷ್ಟದಲ್ಲಿ ಭಾಗಿಯಾಗಲು ನಮ್ಮ ಸಂಸ್ಥೆ ನಿರ್ಧರಿಸಿದೆ ಎಂದು ತಿಳಿಸಿದರು.ಆಳ್ವಾಸ್ ನುಡಿಸಿರಿ ಸಮಿತಿಯ ಕಾರ್ಯದರ್ಶಿ ವೇಣುಗೋಪಾಲ ಶೆಟ್ಟಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಪಿಆರ್‍ಒ ಡಾ.ಪದ್ಮನಾಭ ಶೆಣೈ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.