ಪುತ್ತೂರು(ದಕ್ಷಿಣ ಕನ್ನಡ): ತನಿಖೆ ವೇಳೆ ಬಂಧಿತ ಆರೋಪಿಗಳು ನೀಡಿದ ಮಾಹಿತಿಯನುಸಾರ ಗಾಂಜಾ ಸರಬರಾಜುದಾರನೊಬ್ಬನನ್ನು ಪುತ್ತೂರು ನಗರ ಠಾಣೆ ಪೊಲೀಸರು ಬೆನ್ನಟ್ಟಿ ಮಾದಕ ವಸ್ತು ಸಹಿತ ಬಂಧಿಸಿದ್ದಾರೆ. ಈ ವೇಳೆ ಆರೋಪಿ ಬಳಿ ಪಿಸ್ತೂಲ್ ಹಾಗೂ ಸಜೀವ ಗುಂಡು ಪತ್ತೆಯಾಗಿದೆ. ವಿಟ್ಲ ಕುಂಡಡ್ಕ ನಿವಾಸಿ ಇಬ್ರಾಹಿಂ ಅವರ ಪುತ್ರ ಮಹಮ್ಮದ್ ಮುವಾಝ್ ಬಂಧಿತ ಆರೋಪಿ. ಈತನನ್ನು ಮೇ 22 ರಂದು ಸಂಜೆ ವೇಳೆ ಕೆದಿಲ ಗ್ರಾಮದ ಪೇರಮೊಗ್ರು ಎಂಬಲ್ಲಿ ಬಂಧಿಸಲಾಗಿದೆ.
ಬಂಧಿತನಿಂದ ಕಾರು, ಗಾಂಜಾ ಸೇರಿದಂತೆ ಸುಮಾರು ರೂ. 5.86 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಅದಕ್ಕೂ ಮೊದಲು ಮೇ 22 ರಂದು ಪುತ್ತೂರು ತಾಲೂಕಿನ ಶಾಂತಿಗೋಡು ಗ್ರಾಮದ ವೀರಮಂಗಲ ಬಳಿ ಪುತ್ತೂರು ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು.
ಕಡಬ ತಾಲೂಕಿನ ಕುಂತೂರು ಪೆರಾಬೆ ಗ್ರಾಮದ ಕೋಚಕಟ್ಟೆ ಉಮ್ಮರಬ್ಬ ಎಂಬುವರ ಪುತ್ರ ಶಫೀಕ್ ಕೆ. ವಿ (24 ವ) ಮತ್ತು ಕುಂತೂರು ಎರ್ಮಲ ನಿವಾಸಿ ಅಬ್ದುಲ್ಲ ಎಂಬವರ ಪುತ್ರ ರಾಝೀಕ್ (28) ಬಂಧನಕ್ಕೆ ಒಳಗಾದವರು. ಶಫೀಕ್ ಹಾಗೂ ರಾಝೀಕ್ ಅವರು ವೀರಮಂಗಲ ರೈಲ್ವೆ ಹಳಿ ಬಳಿ ಗಾಂಜಾ ಇರುವ ಬ್ಯಾಗ್ ಹಿಡಿದು ನಿಂತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದರು. ವಿಚಾರಣೆ ವೇಳೆ ಇವರ ಸ್ನೇಹಿತನಾದ ಮಹಮ್ಮದ್ ಮುವಾಝ್(30) ಎಂಬಾತ ಇವರಿಗೆ ಗಾಂಜಾ ಸರಬರಾಜು ಮಾಡುವ ಮಾಹಿತಿ ದೊರೆತಿದೆ.
ಮಹಮ್ಮದ್ ಮುವಾಝ್ ಮಂಗಳೂರಿನಿಂದ ಗಾಂಜಾ ಖರೀದಿಸಿ ಆರೋಪಿಗಳಿಗೆ ಮಾರಲು ಕಾರಿನಲ್ಲಿ ವೀರಮಂಗಲಕ್ಕೆ ಬರುತ್ತಿದ್ದ ಮಾಹಿತಿ ಪಡೆದ ಪೊಲೀಸರು, ಆರೋಪಿಗಳ ಮೂಲಕ ಕೆದಿಲ ಗ್ರಾಮದ ಪೇರಮೊಗ್ರು ಸಮೀಪ ಆತನನ್ನು ಬರುವಂತೆ ಮಾಡಿ ಅಲ್ಲಿ ತಡೆದಿದ್ದಾರೆ. ಈ ವೇಳೆ ಮುವಾಝ್ ಕಾರು ನಿಲ್ಲಿಸಿ ಪರಾರಿಯಾಗುತ್ತಿದ್ದಂತೆ ಬೆನ್ನಟ್ಟಿದ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧನದ ಬಳಿಕ ಪರಿಶೀಲನೆ ವೇಳೆ ಆರೋಪಿ ಮಹಮ್ಮದ್ ಮುವಾಝ್ ನ ಪ್ಯಾಂಟ್ ಕಿಸೆಯಲ್ಲಿ ಪರವಾನಿಗೆ ರಹಿತ ರೂ. 50 ಸಾವಿರ ಮೌಲ್ಯದ ಪಿಸ್ತೂಲ್ ಮತ್ತು ಎರಡು ಸಜೀವ ಗುಂಡುಗಳು ಪತ್ತೆಯಾಗಿವೆ. ಕಾರಿನ ಡಿಕ್ಕಿಯಲ್ಲಿ ಸುಮಾರು 2 ಕೆ.ಜಿ ಗಾಂಜಾ, ಗಾಂಜಾ ತುಂಬಿದ 50 ಗ್ರಾಂ ತೂಕದ 5 ಪ್ಯಾಕೆಟ್, ರೂ. 330 ನಗದು, ಪಾನ್ ಕಾರ್ಡ್, 11 ಎಟಿಎಂ ಕಾರ್ಡ್ಗಳು, ಮೊಬೈಲ್ ಫೋನ್, ಪಿಸ್ತೂಲ್ ಮಾದರಿಯ ಸಿಗರ್ ಲೈಟ್, ಮಾತ್ರೆಗಳು ಸಿಕ್ಕಿವೆ. ಕೃತ್ಯಕ್ಕೆ ಉಪಯೋಗಿಸಿದ ಹುಂಡೈ ಐ 20 ಕಾರು ಸೇರಿದಂತೆ ಒಟ್ಟು ರೂ. 5,86,530 ಸ್ವತ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಪುತ್ತೂರು ನಗರ ಠಾಣೆ ಪೊಲೀಸರು 2 ವರ್ಷದ ಹಿಂದೆ ಅಂತಾರಾಜ್ಯ ಡ್ರಗ್ಸ್ ಮಾರಾಟ ಜಾಲವನ್ನು ಭೇದಿಸಿ 175 ಕೆಜಿ ತೂಕದ ಗಾಂಜಾವನ್ನು ವಶಕ್ಕೆ ಪಡೆದಿದ್ದರು. ಇದು ಮಾತ್ರವಲ್ಲದೆ, ಇಂತಹ ಹತ್ತು ಹಲವು ಮಾದಕ ದ್ರವ್ಯ ಮಾರಾಟದ ಜಾಲವನ್ನು ಭೇದಿಸಿದ್ದರು. ಕೈಗೆ ಸಿಕ್ಕ ಆರೋಪಿಯನ್ನಷ್ಟೇ ಬಂಧಿಸುತ್ತಿದ್ದರೆ ಹೊರತು, ಇದರ ಮೂಲ ಸಾಗಾಟಗಾರರ ಬಗ್ಗೆ ಸಾಹಸಕ್ಕೆ ಹೋಗಿರಲಿಲ್ಲ.
ಆದರೆ, ಈ ಬಾರಿ ಬಂಧಿತ ಆರೋಪಿಗಳಿಗೆ ಗಾಂಜಾ ಸಾಗಿಸುತ್ತಿದ್ದ ಆರೋಪಿಯನ್ನು ಪುತ್ತೂರು ನಗರ ಠಾಣೆ ಪೊಲೀಸರು ಬೆನ್ನಟ್ಟಿ ಬಂಧಿಸಿದ್ದು ಸಾರ್ವಜನಿಕರ ಮೆಚ್ಚುಗೆಗೆ ಕಾರಣವಾಗಿದೆ. ದ. ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವಣೆ, ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರ್ ಚಂದ್ರ ಅವರ ನಿರ್ದೇಶದಂತೆ ಡಿವೈಎಸ್ಪಿ ಡಾ. ಗಾನ ಪಿ. ಕುಮಾರ್, ಪುತ್ತೂರು ನಗರ ಪೊಲೀಸ್ ಠಾಣೆಯ ನಿರೀಕ್ಷಕರಾದ ಸುನಿಲ್ ಕುಮಾರ್ ಎಂ. ಎಸ್ ಅವರು ಮತ್ತು ಪೊಲೀಸ್ ಉಪನಿರೀಕ್ಷಕರಾದ ರಾಜೇಶ್ ಕೆ. ವಿ. ಅವರ ಮಾರ್ಗದರ್ಶನದಂತೆ ಪೊಲೀಸ್ ಉಪನಿರೀಕ್ಷಕರಾದ ನಸ್ರೀನ್ ತಾಜ್ ಚಟ್ಟರಕಿ ಅವರು ಪೊಲೀಸ್ ಸಿಬ್ಬಂದಿಗಳೊಂದಿಗೆ ಪತ್ತೆ ಹಚ್ಚಿದ್ದು, ಸಿಬ್ಬಂದಿಗಳಾದ ಜಗದೀಶ್, ಕಿರಣ್, ಚೋಳಪ್ಪ, ರೇವತಿ, ಉದಯ ಕುಮಾರ್, ಶ್ರೀಧರ್, ಬಸವರಾಜ್, ಶ್ರೀಮಂತ, ಗೀತಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.