ಮಂಗಳೂರು: ನಗರದಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಯುವಕರ ತಂಡವೊಂದನ್ನು ಸಿಸಿಬಿ ಪೊಲೀಸರು ಹಾಗೂ ಎಕನಾಮಿಕ್ ಮತ್ತು ನಾರ್ಕೋಟಿಕ್(ಎನ್‌ಡಿಪಿಎಸ್) ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ನಿಷೇಧಿತ ಮಾದಕ ವಸ್ತುಗಳಾದ ಕೊಕೇನ್, ಎಂಡಿಎಂಎ, ಎಲ್ಎಸ್ ಡಿ, ಪಿಲ್ಸ್, ಚರಸ್ ಗಳನ್ನು ಹೊರರಾಜ್ಯಗಳಿಂದ ಖರೀದಿಸಿ ಮಂಗಳೂರಿನ ಸಾರ್ವಜನಿಕರಿಗೆ ಮಾರಾಟ ಮಾಡಲು ಯತ್ನಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಹಾಗು ಎನ್‌ಡಿಪಿಎಸ್ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ನಾಲ್ವರನ್ನು ಬಂಧಿಸಲಾಗಿದೆ.
ಮಂಗಳೂರು ಕಾರ್ ಸ್ಟ್ರೀಟ್ನ ಕಿಶನ್ ಹೆಗ್ಡೆ (19), ಅನಂತ ಕುಡ್ವ (21), ಫಳ್ನೀರ್ನ ಹಬೀಲ್ ಅಹಮ್ಮದ್ (19), ಅತ್ತಾವರದ ಗೋಪಿನಾಥ ಭಂಡಾರ್ಕರ್( 24) ಬಂಧಿತರು.

ಮಂಗಳೂರು ನಗರದ ಮೋರ್ಗನ್ ಗೇಟ್ ಬಳಿಯಿಂದ ಇವರನ್ನು ವಶಕ್ಕೆ ಪಡೆಯಲಾಗಿದ್ದು, ಬಂಧಿತರಿಂದ ಒಟ್ಟು 2.5 ಲಕ್ಷ ರೂ ಮೌಲ್ಯದ 22 ಗ್ರಾಂ ಕೋಕೆನ್, 6 ಗ್ರಾಂ ಎಂಡಿಎಂಎ, 75 ಫಿಲ್ಸ್, 5 ಎಲ್ಎಸ್ ಡಿ, 10 ಗ್ರಾಂ ಚರಸ್ ಹಾಗೂ 3 ಮೊಬೈಲ್ ಫೋನ್, ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಇಕನಾಮಿಕ್ ಮತ್ತು ನಾರ್ಕೋಟಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.