ಬಂಟ್ವಾಳ: ಬ್ರಹ್ಮರಕೂಟ್ಲುವಿನ ಟೋಲ್ ಬೂತ್ ಪಕ್ಕದಲ್ಲಿರುವ ಸರ್ವೀಸ್ ರಸ್ತೆಯಲ್ಲಿ ವಾಹನಗಳು ಓಡಾಡುವುದನ್ನು ತಪ್ಪಿಸಲು ಎನ್ಎಚ್ಎಐ ತಡೆ ಹಾಕಿರುವುದನ್ನು ಖಂಡಿಸಿ ವಾಹನ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಜೆಯೊಳಗೆ ತೆರವುಗೊಳಿಸದೇ ಇದ್ದರೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದ್ದಾರೆ.
ಬಂಟ್ವಾಳ ತಾಲೂಕಿನ ಬ್ರಹ್ಮರಕೂಟ್ಲುವಿನಲ್ಲಿರುವ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಟೋಲ್ ಗೇಟ್ ಸಮೀಪದ ಸರ್ವೀಸ್ ರಸ್ತೆ ಮೇಲೆಯೂ ಸುಂಕ ವಸೂಲಿಗಾರರ ಕಣ್ಣು ಬಿದ್ದಿದೆ. ಇಲ್ಲಿ ಸಂಚರಿಸುವ ಗೂಡ್ಸ್ ಟೆಂಪೋದಂತಹ ವಾಹನಗಳು ಸಾಗಬಾರದು ಎಂಬ ಉದ್ದೇಶದಿಂದ ತಡೆ ಹಾಕಲಾಗಿದೆ. ಪಿಕಪ್ ಮಾಲೀಕರು, ಮಿನಿ ಗೂಡ್ಸ್ ಚಾಲಕರು ಇದರಿಂದ ಆಕ್ರೋಶಗೊಂಡಿದ್ದಾರೆ.
ಬಡವರ ಹೊಟ್ಟೆಯ ಮೇಲೆ ಹೊಡೆಯುವ ಹುನ್ನಾರ ಇದಾಗಿದೆ. ಮೊದಲೇ ಪೆಟ್ರೋಲ್ ಬೆಲೆ ಅಧಿಕವಾಗಿದೆ. ಅದರ ಮೇಲೆ ಸರ್ವೀಸ್ ರಸ್ತೆಯಲ್ಲೂ ಹೋಗದಂತೆ ಮಾಡಿದರೆ ನಾವು ಬದುಕುವುದಾದರೂ ಹೇಗೆ ಎಂದು ಪ್ರಶ್ನಿಸಿದ್ದಾರೆ. ಮಂಗಳವಾರ ಬೆಳಗ್ಗಿನಿಂದಲೇ ಪಿಕಪ್ ಚಾಲಕರು ಸ್ಥಳೀಯರೊಂದಿಗೆ ಸೇರಿ ಪ್ರತಿಭಟನೆ ನಡೆಸುತ್ತಿದ್ದು, ಸದ್ಯಕ್ಕೆ ಪರಿಸ್ಥಿತಿ ಬಿಗುವಿನಿಂದ ಕೂಡಿದೆ.