ಮಂಗಳೂರು: ಮುಕ್ಕದಲ್ಲಿರುವ ಶ್ರೀನಿವಾಸ್ ವಿಶ್ವವಿದ್ಯಾನಿಲಯದ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕಿ ಸಂಧ್ಯಾ ಶೆಣೈ ಅವರಿಗೆ ಪ್ರತಿಷ್ಠಿತ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ ಇಂಡಿಯಾ (NASI) - 2021ರ ಯುವ ವಿಜ್ಞಾನಿ ಪ್ಲಾಟಿನಂ ಜುಬಿಲಿ ಪ್ರಶಸ್ತಿಯನ್ನು ನೀಡಲಾಗಿದೆ.
ಸಂಧ್ಯಾ ಶೆಣೈ ಅವರು ರಸಾಯನಶಾಸ್ತ್ರದಲ್ಲಿ ಮಾಡಿದ ಸಾಧನೆ ಪರಿಗಣಿಸಿ ಭಾನುವಾರ ನಡೆದ ವರ್ಚುವಲ್ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.
ಈ ಪ್ರಶಸ್ತಿಯನ್ನು ನೀಡಿರುವ NASI ಸಂಸ್ಥೆ ಪ್ರಯಾಗ್ ರಾಜ್ (ಅಲಹಾಬಾದ್) ದಲ್ಲಿ ನೆಲೆಗೊಂಡಿರುವ ಭಾರತದ ಮೊದಲ ವಿಜ್ಞಾನ ಅಕಾಡೆಮಿಯಾಗಿದೆ. ಭಾರತದಲ್ಲಿ ಯುವ ವಿಜ್ಞಾನಿಗಳಲ್ಲಿ ಭರವಸೆ, ಸೃಜನಶೀಲತೆ ಮತ್ತು ಶ್ರೇಷ್ಠತೆಯನ್ನು ಗುರುತಿಸಲು ಈ ಪ್ರಶಸ್ತಿಯನ್ನು ನೀಡುತ್ತಿದೆ. ಭಾರತದಲ್ಲಿ ನಡೆಸಿದ ಸಂಶೋಧನಾ ಕಾರ್ಯಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಸಂಧ್ಯಾ ಶೆಣೈ ಅವರು ಮಾಡಿದ ಸಂಶೋಧನಾ ಪ್ರಬಂಧವು ಲಂಡನ್ನ ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಯ್ಕೆ ಮಾಡಿದ 100 ಪ್ರಬಂಧಗಳಲ್ಲಿ ಒಂದಾಗಿದ್ದು, ಈ ಮೂಲಕ ವಿಶ್ವದ ಶ್ರೇಷ್ಠ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಪ್ರಶಸ್ತಿಯು ಪ್ರಶಸ್ತಿ ಪತ್ರ, ಪದಕ ಮತ್ತು ನಗದು ಬಹುಮಾನವನ್ನು ಹೊಂದಿದೆ.
ಇದನ್ನೂ ಓದಿ: ಕರಾವಳಿಯಲ್ಲಿ ಕೇಸರಿ ಕೋಟೆ ಭದ್ರಪಡಿಸಿದ್ದ ‘ಭೀಷ್ಮ’: ಉರಿಮಜಲು ಕೆ. ರಾಮಭಟ್ ಹೆಜ್ಜೆ ಗುರುತು