ಬೆಳ್ತಂಗಡಿ : ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಯಂತ್ರಗಳ ಸೂಕ್ತ ನಿರ್ವಹಣೆಯಲ್ಲಿ ತಾಂತ್ರಿಕ ಸಮಸ್ಯೆ ಹಾಗೂ ಸಿಬ್ಬಂದಿಯಿಂದ ರೋಗಿಗಳಿಗೆ ಸೂಕ್ತ ಸ್ಪಂದನೆ ಸಿಗದಿರುವ ಕುರಿತು ಹಲವು ದೂರು ಕೇಳಿ ಬಂದ ಹಿನ್ನೆಲೆ ಸೆ.26ರಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಚಂದ್ರ ಬಾಯರಿ ಆಸ್ಪತ್ರೆಗೆ ಭೇಟಿ ನೀಡಿ ಸಮಸ್ಯೆ ಆಲಿಸಿದರು.
ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ಕರೆದು ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಡಯಾಲಿಸಿಸ್ ಯಂತ್ರ ಪದೇಪದೆ ಕೆಟ್ಟು ಹೋಗುತ್ತಿರುವ ಕುರಿತು ದೂರು ಬಂದಿರುವ ಹಿನ್ನೆಲೆ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಡಯಾಲಿಸಿಸ್ ಯಂತ್ರಗಳ ಕ್ವಾಲಿಟಿ ಸಮಸ್ಯೆ ಇರುವುದು ಕಂಡು ಬಂದಿದೆ. ಈಗಾಗಲೇ ಕಂಪನಿ ಜೊತೆ ಮಾತುಕತೆ ನಡೆಸಲಾಗಿದೆ. ಶೀಘ್ರವೇ ತಾಂತ್ರಿಕ ತೊಂದರೆ ಸರಿಪಡಿಸಲಾಗುವುದು ಎಂದು ಹೇಳಿದರು.
ಈಗಾಗಲೇ ಆರೋಗ್ಯ ಕೇಂದ್ರದಲ್ಲಿ 6 ಡಯಾಲಿಸಿಸ್ ಯಂತ್ರವಿದೆ. ಹೆಚ್ಚುವರಿ 1 ಯಂತ್ರ ಸೇರ್ಪಡೆಗೊಂಡಿದೆ. ಇದರಿಂದ ಮುಂದಿನ ದಿನಗಳಲ್ಲಿ 7 ಡಯಾಲಿಸಿಸ್ ಯಂತ್ರ ರೋಗಿಗಳ ಸೇವೆಗೆ ಲಭ್ಯವಾಗಲಿದೆ. ರೋಗಿಗಳಿಗೆ ಆಗುತ್ತಿರುವ ಸಮಸ್ಯೆ ಕುರಿತು ರೋಗಿಗಳ ಪರವಾಗಿ ಮಹೇಶ್ ಲಾಯ್ಲ ಅವರು 8 ಪ್ರಮುಖ ಸಮಸ್ಯೆ ಬಗೆಹರಿಸುವಂತೆ ನಮ್ಮ ಗಮನಕ್ಕೆ ತಂದಿದ್ದಾರೆ.
ಪ್ರಮುಖವಾಗಿ ಎರಿಥ್ರೋಪೊಯೆಟಿನ್ ಹಾಗೂ ಈರನ್ ಸುಕ್ರೋಸ್ ಇಂಜೆಕ್ಷನ್ ಕೊರತೆ ಕಂಡು ಬರುತ್ತಿರುವ ವಿಚಾರ ಗಮನಕ್ಕೆ ಬಂದಿದೆ. ಔಷಧ ಸಂಗ್ರಹಿಸಿಡಲು ಫ್ರಿಡ್ಜ್ ವ್ಯವಸ್ಥೆ ಹಾಗೂ ಬಿಪಿ ಪರಿಶೀಲನೆ ಯಂತ್ರವನ್ನು ತರಿಸುವ ವ್ಯವಸ್ಥೆ ಮಾಡಲಾಗುವುದು ಎಂದರು. ಈಗಾಗಲೇ ಗ್ರಾಪಂ ಮಟ್ಟದಲ್ಲಿ ಕೋವಿಡ್ ಪರೀಕ್ಷೆ ನಡೆಸಲು ಜಿಲ್ಲಾಡಳಿತ ಸೂಚಿಸಿದ್ದರಿಂದ ತಾಲೂಕು ವ್ಯಾಪ್ತಿಗೆ ರ್‍ಯಾಪಿಡ್ ಆಂಟಿಜನ್ ಕಿಟ್ ಅವಶ್ಯಕತೆ ಎಷ್ಟಿದೆ ಎಂಬ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ. ಕಲಾಮಧು, ಈಗಾಗಲೇ ತಾಲೂಕಿಗೆ 3 ಸಾವಿರ ಕಿಟ್ ನೀಡಲಾಗಿದೆ.
ಅವಶ್ಯಕತೆ ಹೆಚ್ಚಾದಂತೆ ಜಿಲ್ಲಾ ಆರೋಗ್ಯ ಇಲಾಖೆಯಿಂದ ತರಿಸಲಾಗುವುದು ಎಂದು ತಿಳಿಸಿದರು. ರೋಗ ಲಕ್ಷಣವಿದ್ದಲ್ಲಿ ಜನ ಸಾಮಾನ್ಯರು ಅವಶ್ಯಕವಾಗಿ ಕೋವಿಡ್ ಪರೀಕ್ಷೆಗೊಳಪಟ್ಟು ಸೋಂಕು ಹರಡುವುದನ್ನು ತಡೆಯಬೇಕು ಎಂದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ಮೇಲ್ವಿಚಾರಕ ಡಾ.ಚಂದ್ರಕಾಂತ್ ಉಪಸ್ಥಿತರಿದ್ದರು.