ಮಂಗಳೂರು: ಬೆಂಗಳೂರು ಗಲಭೆಯಲ್ಲಿ ಮೃತಪಟ್ಟ ಮೂವರಿಗೆ ಪರಿಹಾರ ನೀಡಲು ಎಸ್ಡಿಪಿಐ ಆಗ್ರಹಿಸಿದೆ. ಆದರೆ ಅವರಿಗೆ ಪರಿಹಾರ ಕೊಟ್ಟರೆ ವಿಶ್ವ ಹಿಂದೂ ಪರಿಷತ್ ಉಗ್ರ ಹೋರಾಟ ನಡೆಸಲಿದೆ ಎಂದು ಸಂಘಟನೆಯ ಮಂಗಳೂರು ವಿಭಾಗದ ಮುಖಂಡ ಶರಣ್ ಪಂಪ್ವೆಲ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು ಗಲಭೆ ಹಿನ್ನೆಲೆಯಲ್ಲಿ ಮಂಗಳೂರಿನ ಪಿವಿಎಸ್ ಸರ್ಕಲ್ ಬಳಿ ವಿಶ್ವ ಹಿಂದೂ ಪರಿಷತ್ ನಡೆಸಿದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ಮಂಗಳೂರು ಗಲಭೆ, ಪಾದಾರಾಯನಪುರ ಗಲಭೆಯನ್ನು ಗಂಭೀರವಾಗಿ ತೆಗೆದುಕೊಳ್ಳದ ಕಾರಣ ಬೆಂಗಳೂರು ಗಲಭೆ ನಡೆದಿದೆ. ಇದರ ಹಿಂದೆ ಕೈವಾಡ ಇರುವ ಎಸ್ಡಿಪಿಐ ಮತ್ತು ಪಿಎಫ್ಐ ಸಂಘಟನೆಗಳನ್ನ ನಿಷೇಧಿಸಬೇಕು ಎಂದು ಅವರು ಆಗ್ರಹಿಸಿದರು.
ಗುಪ್ತಚರ ಇಲಾಖೆ ಮೂರು ದಿನಗಳ ಹಿಂದೆಯೇ ನೀಡಿದ್ದ ಎಚ್ಚರಿಕೆಯನ್ನು ಪೊಲೀಸ್ ಇಲಾಖೆ ಗಂಭೀರವಾಗಿ ತೆಗೆದುಕೊಳ್ಳದೇ ಈ ರೀತಿ ಆಗಿದೆ ಎಂದು ಆಪಾದಿಸಿದ ಅವರು ಘಟನೆಯ ತನಿಖೆಯನ್ನು ಎನ್ಐಎಗೆ ವಹಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ವಿಹಿಂಪ ರಾಜ್ಯ ಮುಖಂಡ ಎಂ.ಬಿ ಪುರಾಣಿಕ್ ಅವರು ಬೆಂಗಳೂರು ಘಟನೆಯ ಹಿಂದೆ ಇರುವ ಎಸ್ಡಿಪಿಐ, ಪಿಎಫ್ ಸಂಘಟನೆಗಳನ್ನ ತಕ್ಷಣ ನಿಷೇಧಿಸಬೇಕು ಮತ್ತು ಇದರ ಹಿಂದಿರುವ ಶಕ್ತಿಗಳ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.