ಪುತ್ತೂರು: ಪೈಂಟ್ ಕೆಲಸ ಮಾಡುತ್ತಿದ್ದ ಯುವಕ ವಿದ್ಯುತ್ ಅವಘಡದಿಂದ ಮೃತಪಟ್ಟ ವಿಚಾರಕ್ಕೆ ಸಂಬಂಧಿಸಿ ಕೇವಲ ಗುತ್ತಿಗೆದಾರರ ವಿರುದ್ಧ ಮಾತ್ರವಲ್ಲ. ನಿರ್ಲಕ್ಷ್ಯ ವಹಿಸಿದ ಮೆಸ್ಕಾಂ ಮತ್ತು ಆಸ್ಪತ್ರೆಯ ವಿರುದ್ಧವೂ ಪ್ರಕರಣ ದಾಖಲಿಸಬೇಕೆಂದು ದ.ಕ.ದಲಿತ ಸೇವಾ ಸಮಿತಿ ಆಗ್ರಹಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದ.ಕ.ದಲಿತ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಬಿ.ಕೆ.ಸೇಸಪ್ಪ ಬೆದ್ರಕಾಡು , ಫೆ.6ಕ್ಕೆ ಪ್ರಗತಿ ಆಸ್ಪತ್ರೆಯಲ್ಲಿ ಪೈಂಟಿಂಗ್ ಕೆಲಸ ಮಾಡುವ ಸಮಯ ಬಪ್ಪಳಿಗೆ ದಿ.ಬಾಬು ಆದಿದ್ರಾವಿಡ ಎಂಬವರ ಪುತ್ರ ದೀಕ್ಷಿತ್ ಅವರಿಗೆ ವಿದ್ಯುತ್ ಶಾಕ್ ಹೊಡೆದಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಮಂಗಳೂರು ಎ.ಜೆ.ಆಸ್ಪತ್ರೆಗೆ ದಾಖಲಿಸಿತ್ತಾದರೂ ಫೆ. 10ರಂದು ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಆದರೆ, ಘಟನೆಗೆ ಸಂಬಂಧಿಸಿ ಪೊಲೀಸರು ತನಿಖೆ ನಡೆಸದೆ ಪೈಂಟಿಂಗ್ ಗುತ್ತಿಗೆ ಪಡೆದುಕೊಂಡಿದ್ದ ಪುರುಷೋತ್ತಮ ಎಂಬವರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಕರಣದ ಸತ್ಯಾಸತ್ಯತೆಯನ್ನು ಅರಿತು ಅವರು ಕ್ರಮಕೈಗೊಳ್ಳಬಹುದಿತ್ತು. ಘಟನೆಗೆ ಸಂಬಂಧಿಸಿ ಆಸ್ಪತ್ರೆಯ ಡಾ.ಶ್ರೀಪತಿ ರಾವ್ ಮತ್ತು ಮೆಸ್ಕಾಂ ಅವರ ನಿರ್ಲಕ್ಷ್ಯವೂ ಇದೆ. ಆಸ್ಪತ್ರೆಯ ಮತ್ತು ಮೆಸ್ಕಾಂ ಅವರ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಬೇಕು. ಇಲ್ಲವಾದಲ್ಲಿ ವಾರದೊಳಗೆ ಪುತ್ತೂರು ನಗರ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಲಿದ್ದೇವೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.