ಮಂಗಳೂರು: ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಎಲ್ಲೆಡೆ ಮನೆಮಾಡಿದೆ. ಮನೆಯಲ್ಲಿದ್ದು ದೀಪಾವಳಿ ಆಚರಿಸುವ ಈ ಹೊತ್ತಿನಲ್ಲಿ ಶಿಕ್ಷಣದ ಕಾರಣದಿಂದ ಕೆಲ ವಿದ್ಯಾರ್ಥಿಗಳು ಮನೆಯಿಂದ ದೂರವಿದ್ದು, ಸುಂದರ ಕ್ಷಣಗಳನ್ನು ಮಿಸ್ ಮಾಡಿಕೊಳ್ಳುತ್ತಾರೆ. ಹಾಗಾಗಿ, ಮಂಗಳೂರಿನ ಕರಾವಳಿ ಕಾಲೇಜು ಕ್ಯಾಂಪಸ್‌ನಲ್ಲಿ ಮನೆಯಿಂದ ದೂರವಿರುವ ವಿದ್ಯಾರ್ಥಿಗಳಿಗಾಗಿ ಸಡಗರದ ಹಬ್ಬ ಆಯೋಜಿಸಲಾಗಿದೆ.
ಮಂಗಳೂರಿನ ಕರಾವಳಿ ಗ್ರೂಪ್ ಆಫ್ ಕಾಲೇಜಿನಲ್ಲಿ ಹಲವು ವಿದ್ಯಾಸಂಸ್ಥೆಗಳಿವೆ. ಇಂಜಿನಿಯರಿಂಗ್, ಫ್ಯಾಷನ್ ಡಿಸೈನಿಂಗ್, ಪ್ಯಾರ ಮೆಡಿಕಲ್ ವಿದ್ಯಾಸಂಸ್ಥೆಗಳನ್ನು ಹೊಂದಿರುವ ಕರಾವಳಿ ಗ್ರೂಪ್ ಆಫ್ ಕಾಲೇಜು ಮತ್ತು ಜಿ ಆರ್ ಮೆಡಿಕಲ್ ಕಾಲೇಜಿನಲ್ಲಿ ಹೊರ ರಾಜ್ಯದ ವಿದ್ಯಾರ್ಥಿ, ವಿದ್ಯಾರ್ಥಿನಿಯರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ದೀಪಾವಳಿ ಸಂದರ್ಭಗಳಲ್ಲಿ ಇವರಿಗೆ ಊರಿಗೆ ಹೋಗಿ ಹಬ್ಬ ಆಚರಸಲು ಸಾಧ್ಯವಾಗುತ್ತಿಲ್ಲ. ಇದಕ್ಕಾಗಿ ಕರಾವಳಿ ಗ್ರೂಪ್ ಅಫ್ ಕಾಲೇಜಿನ ಮತ್ತು ಜಿ ಆರ್ ಮೆಡಿಕಲ್ ಕಾಲೇಜಿನ ಅಧ್ಯಕ್ಷ ಗಣೇಶ್ ರಾವ್ ತಮ್ಮ ಕಾಲೇಜಿನಲ್ಲಿ ಸಂಭ್ರಮದಿಂದ ದೀಪಾವಳಿ ಆಯೋಜಿಸಲು ಅವಕಾಶ ನೀಡಿದ್ದಾರೆ.
ಕೊಟ್ಟಾರದಲ್ಲಿರುವ ಕರಾವಳಿ ಕಾಲೇಜ್ ಅನ್ನು ದೀಪಗಳಿಂದ ಅಲಂಕರಿಸಲಾಗಿದ್ದು, ಕಾಲೇಜಿನ ಇಡೀ ಕಟ್ಟಡ, ಮರಗಳನ್ನು ವಿದ್ಯುತ್ ದೀಪಗಳಿಂದ ಬೆಳಗಿಸಲಾಗಿದೆ. ಅಲ್ಲಲ್ಲಿ ಗೂಡು ದೀಪಗಳನ್ನಿಟ್ಟು ಶೃಂಗರಿಸಲಾಗಿದೆ. ಕಾಲೇಜಿನ ಆವರಣದಲ್ಲಿ ನೂರಾರು ಹಣತೆ, ದೀಪಗಳನ್ನು ಹಚ್ಚಲಾಗಿದೆ. ಶ್ರೀ ಕೃಷ್ಣನ ರಂಗೋಲಿಯನ್ನು ಬಿಡಿಸಿ ಅದಕ್ಕೆ ದೀಪಾಲಂಕಾರ ಮಾಡಿದ್ದು, ನೂರಾರು ವಿದ್ಯಾರ್ಥಿನಿಯರು ದೀಪ ಹಚ್ಚಿ ಸಂಭ್ರಮಿದರು. ಅಷ್ಟೇ ಅಲ್ಲದೇ, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಡುಗಳಿಗೆ ನೃತ್ಯ ಮಾಡಿ ಗಮನ ಸೆಳೆದರು.
ಇದನ್ನೂ ಓದಿ: ಭಾವೈಕ್ಯತೆಯ ದೀಪಾವಳಿ.. ಶ್ರೀರಾಮನಿಗೆ ಆರತಿ ಬೆಳಗಿದ ಮುಸ್ಲಿಂ ಮಹಿಳೆಯರು: ವಿಡಿಯೋ
ಕಾಲೇಜಿನಲ್ಲಿ ಆಯೋಜಿಸಿರುವ ದೀಪಾವಳಿ ಸಂಭ್ರಮದ ಬಗ್ಗೆ ಮಾತನಾಡಿದ ಕರಾವಳಿ ಗ್ರೂಪ್ ಅಫ್ ಕಾಲೇಜಿನ ಅಧ್ಯಕ್ಷ ಗಣೇಶ್ ರಾವ್, 'ನಮ್ಮ ಸಂಸ್ಥೆಯಲ್ಲಿ ದೇಶ, ವಿದೇಶದ ವಿದ್ಯಾರ್ಥಿಗಳಿದ್ದಾರೆ. ದೀಪಾವಳಿ ಪ್ರಯುಕ್ತ ಎರಡು ದಿನ ರಜೆ ಇದ್ದರೂ ಅವರಿಗೆ ತಮ್ಮ ಮನೆಗೆ ಹೋಗಿ ದೀಪಾವಳಿ ಆಚರಣೆ ಮಾಡಲು ಆಗುವುದಿಲ್ಲ. ಹಾಗಾಗಿ ಮಕ್ಕಳ ಮನಸ್ಸಿಗೆ ನೋವಾಗಬಾರದು ಎಂದು ನಾವು ಪಾಲಕರ ಸ್ಥಾನದಲ್ಲಿ ನಿಂತು ಮಕ್ಕಳ ಖುಷಿಗಾಗಿ ಈ ಆಚರಣೆ ಮಾಡುತ್ತಿದ್ದೇವೆ' ಎಂದು ತಿಳಿಸಿದರು.
ಇದನ್ನೂ ಓದಿ: ದೀಪಾವಳಿ ಸಂಭ್ರಮ.. ಸ್ವರ್ಣ ಮಂದಿರದಲ್ಲಿ ಪೂಜೆ ಸಲ್ಲಿಸಿದ ಭಕ್ತರು
ಮೈಸೂರಿನ ಭವಾನಿ ಎಂಬ ವಿದ್ಯಾರ್ಥಿನಿ ಮಾತನಾಡಿ, 'ದೀಪಾವಳಿ ಆಚರಣೆಗೆ ಮನೆಗೆ ಹೋಗಬೇಕಿತ್ತು. ಅದರೆ ಇಲ್ಲಿ ಆಯೋಜಿಸಿದ ಸಂಭ್ರಮ ಖುಷಿ ಕೊಟ್ಟಿದೆ. ದೀಪಾವಳಿ ಪ್ರಯುಕ್ತ ಇಲ್ಲಿ ಆಯೋಜಿಸಿದ ನೃತ್ಯಗಳಿಂದ ಮನೋಲ್ಲಾಸ ಉಂಟಾಯಿತು. ನಾನು ನೃತ್ಯ ಮಾಡಿ ಸಂಭ್ರಮಿಸಿದೆ' ಎಂದು ಹರ್ಷ ವ್ಯಕ್ತಪಡಿಸಿದರು.