ಬೆಳ್ತಂಗಡಿ: ತಾಲೂಕಿನ ಸುಲ್ಕೇರಿ ಗ್ರಾಮದ ಅಂಟ್ರಿಂಜೆ ಎಂಬಲ್ಲಿ ವಾಸವಿರುವ 7 ಕೊರಗ ಕುಟುಂಬಗಳು ಲಾಕ್ ಡೌನ್ ನಿಂದಾಗಿ ಕಳೆದ ಕೆಲವು ದಿನಗಳಿಂದ ನಿತ್ಯೋಪಯೋಗಿ ವಸ್ತುಗಳಿಲ್ಲದೇ ಕಷ್ಟ ಪಡುತಿದ್ದರು. ಇವರಿಗೆ ಅನಿಲ್ ಪೈ ಬಂಗಾಡಿ ಇವರ ಮನವಿ ಮೇರೆಗೆ ಉದ್ಯಮಿ ಗೋಕುಲ್ ದಾಸ್ ಭಟ್ ಅವರ ಸಹಕಾರದೊಂದಿಗೆ ಅಕ್ಕಿ ಹಾಗೂ ಇನ್ನಿತರ ವಸ್ತುಗಳನ್ನು ವಿತರಿಸಲಾಯಿತು.
ಈ ಮನೆಗಳಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲದಿರುವ ವಿಚಾರ ತಿಳಿದು ಸಂಬಂಧಪಟ್ಟ ಇಲಾಖೆಗಳ ಗಮನ ಸೆಳೆಯುವ ಬಗ್ಗೆ ಭರವಸೆ ನೀಡಲಾಯಿತು.
ಈ ಸಂದರ್ಭದಲ್ಲಿ ರೋಹಿದಾಸ್ ಪೈ , ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)ದ ಮೈಸೂರು ವಿಭಾಗ ಸಂಘಟನಾ ಸಂಚಾಲಕ ಬಿ.ಕೆ ವಸಂತ್ , ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ರಾಜ್ಯ ಸಮಿತಿ ಸದಸ್ಯ ಶೇಖರ್ ಲಾಯಿಲ ಉಪಸ್ಥಿತರಿದ್ದರು.