ಬೆಳ್ತಂಗಡಿ: ಮುಂದಿನ ದಿನಗಳಲ್ಲಿ ಅಕ್ರಮ-ಸಕ್ರಮಕ್ಕೆ ಅರ್ಜಿ ಕೊಟ್ಟಿರುವ ಕೃಷಿಕರ ಭೂಮಿಯ ಹಕ್ಕು ಪತ್ರವನ್ನು ಶೀಘ್ರದಲ್ಲಿ ನೀಡುವಂತಹ ಕಾರ್ಯ ಮಾಡಲಾಗುವುದು. ತಾಲೂಕಿನ ಹಿತದೃಷ್ಟಿಯಿಂದ ಈಗಾಗಲೇ ಎರಡು ವರ್ಷಗಳಲ್ಲಿ 600 ಕೋಟಿಗಿಂತಲೂ ಅಧಿಕ ಅನುದಾನ ಈ ಕ್ಷೇತ್ರದ ಅಭಿವೃದ್ಧಿಗಾಗಿ ಬಂದಿದ್ದು, ರಾಜ್ಯದ ಇತರೇ ತಾಲೂಕಿಗಿಂತ ಹೆಚ್ಚಿನ ಅಭಿವೃದ್ಧಿ ಕಾರ್ಯ ನಡೆದಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಮಿನಿ ವಿಧಾನಸೌಧದಲ್ಲಿ ಸೆ.15 ರಂದು ಕೊಕ್ಕಡ ಹೋಬಳಿ ಮಟ್ಟದ ಕಂದಾಯ ಅದಾಲತ್ ಹಾಗೂ 94ಸಿ ಯೋಜನೆಯ ಫಲಾನುಭವಿಗಳಿಗೆ ಹಕ್ಕುಪತ್ರ ಹಾಗೂ ಪಿಂಚಣಿದಾರರಿಗೆ ಮಂಜೂರಾತಿ ಪತ್ರ ವಿತರಿಸಿ ಮಾತನಾಡಿದರು.
ನಿವೇಶನ ಅಥವಾ ಮನೆ ಇಲ್ಲದ ಕ್ಷೇತ್ರದ ಕೊಕ್ಕಡ, ಬೆಳ್ತಂಗಡಿ, ವೇಣೂರು ಹೋಬಳಿಯ 700ಕ್ಕೂ ಅಧಿಕ ಮಂದಿಗೆ 94ಸಿ ಹಕ್ಕುಪತ್ರ ನೀಡುವ ಮೂಲಕ ಹೊಸ ಬದುಕು ಕಟ್ಟಿಕೊಡುವ ಕೆಲಸವಾಗಲಿದೆ. ಕಳೆದ ಎರಡು ವರ್ಷಗಳ ಅವಧಿಯಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಸುಮಾರು 2,500 ಕ್ಕೂ ಅಧಿಕ ಮಂದಿ ಫಲಾನುಭವಿಗಳಿಗೆ ಈಗಾಗಲೇ ಹಕ್ಕುಪತ್ರ ವಿತರಿಸಲಾಗಿದೆ. ಕೊರೊನಾ ಸಂಕಷ್ಟದ ಸಂದರ್ಭದಲ್ಲೂ ತಹಶೀಲ್ದಾರ್ ಹಾಗೂ ಅಧಿಕಾರಿಗಳು ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಿ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ ಎಂದರು.