ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದಿರೆಯ ಕಡಲಕೆರೆ ನಿಸರ್ಗ ಧಾಮದಲ್ಲಿ ಫೆ. 21ರಂದು ನಡೆಯಲಿರುವ ಕೋಟಿ-ಚೆನ್ನಯ ಜೋಡುಕರೆ ಕಂಬಳವನ್ನು ಒಂದೇ ದಿನ ನಡೆಸುವ ಕುರಿತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯೊಂದಿಗೆ ಸಮಾಲೋಚನೆ ನಡೆಸಿ ರೂಪುರೇಷೆ ಮಾಡಲು ಮೂಡುಬಿದಿರೆ ಕಂಬಳ ಸಮಿತಿಯ ಸಭೆಯಲ್ಲಿ ನಿರ್ಧರಿಸಲಾಗಿದೆ.
ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ ಒಂಟಿಕಟ್ಟೆಯ ಸೃಷ್ಠಿ ಗಾರ್ಡನ್‍ನಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನವನ್ನು ತೆಗೆದುಕೊಳ್ಳಲಾಯಿತು.
ಮೂಡುಬಿದಿರೆ ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ಗುಣಪಾಲ ಕಡಂಬ ಮಾತನಾಡಿ, ಕೊರೊನಾ ನಿಯಮಗಳನ್ನು ಪಾಲಿಸುವ ಮುಖೇನ ಕಂಬಳವು ಶಿಸ್ತುಬದ್ಧವಾಗಿ ನಡೆಯಲು ಸ್ವಯಂ ಸೇವಕರ, ಕಂಬಳಾಭಿಮಾನಿಗಳ ಸಹಕಾರ ಅತ್ಯಗತ್ಯವಾಗಿದೆ. ಕೋಣಗಳು ಫಿಟ್ನೆಸ್ ಪ್ರಮಾಣಪತ್ರ ಹೊಂದಿರಬೇಕು. ಮೂಡುಬಿದಿರೆ ಕಂಬಳಕ್ಕೆ ಮೊದಲು ನಡೆಯುವ ಕಂಬಳಗಳಲ್ಲಿ ಉತ್ತಮ ಸಾಧನೆ ಮಾಡಿದ ಆಯ್ದ ಕೋಣಗಳನ್ನು ಸೇರಿಸಿ ಕಂಬಳ ಮಾಡುವ ಅವಕಾಶವೂ ಇದೆ ಎಂದು ತಿಳಿಸಿದರು.
ಕಂಬಳ ಕೋಣಗಳ ಹಿರಿಯ ಯಜಮಾನ ಭಾಸ್ಕರ್ ಎಸ್. ಕೋಟ್ಯಾನ್ ಮಾತನಾಡಿ, ಕಂಬಳ ಓಟಗಾರರಿಗೆ 2 ದಿನಗಳಲ್ಲಿ ಕೋಣಗಳನ್ನು ಓಡಿಸಲು ಅಸಾಧ್ಯ. ಆದ್ದರಿಂದ ಒಂದೇ ದಿನದಲ್ಲಿ ಕಂಬಳವನ್ನು ಮುಗಿಸುವುದು ಸೂಕ್ತ ಎಂದು ಹೇಳಿದರು.
ಈಗಾಗಲೇ ಇರುವಂತೆ ಕಂಬಳಗಳಲ್ಲಿ ಎಲ್ಲಾ ಕೋಣಗಳಿಗೂ ಅವಕಾಶವನ್ನು ಕಲ್ಪಿಸೋಣ. ಕಂಬಳದ ರೂಪುರೇಷೆ, ಸಿದ್ಧತೆಗಳ ಕುರಿತು ಅಂತಿಮ ನಿರ್ಧಾರವನ್ನು ಜಿಲ್ಲಾಧಿಕಾರಿಯವರ ಬಳಿ ಚರ್ಚಿಸಿದ ಬಳಿಕ ಪ್ರಕಟಿಸಲಾಗುವುದೆಂದು ಶಾಸಕ ಉಮಾನಾಥ ಕೋಟ್ಯಾನ್ ಸಭೆಯಲ್ಲಿ ತಿಳಿಸಿದ್ದಾರೆ.