ಸುಳ್ಯ : ತಾಲೂಕಿನ ಅಜ್ಜಾವರ ಗ್ರಾಮದ ಮುಳ್ಯ -ಅಟ್ಲುರು ಆಸುಪಾಸಿನ ಗ್ರಾಮಸ್ಥರು ಮನನೊಂದು ಎಚ್ಚರಿಕೆ ಬ್ಯಾನರ್ ಅಳವಡಿಸಿದ್ದು, ಇದು ಜನಪ್ರತಿನಿಧಿಗಳನ್ನು ಅಣಕಿಸುವಂತಿದೆ.
ಮುಳ್ಯದ ಪ್ರಜ್ಞಾವಂತ ಮತದಾರ ಬಾಂಧವರೇ, ಗ್ರಾಮ ಪಂಚಾಯತ್ ಸದಸ್ಯರ ಆಯ್ಕೆ ಮಾಡುವ ಅವಕಾಶ ಬಂದಿದೆ. ಎಚ್ಚರಿಕೆಯಿಂದ ಮತ ಚಲಾಯಿಸಿ. ನಾಟಕ ಕಂಪೆನಿ ನಿಮ್ಮ ಮನೆಯಲ್ಲಿ ಬಾಗಿಲಿಗೆ ಬರುತ್ತದೆ. 5 ವರ್ಷ ಮಾಡದ ಕೆಲಸ ಈಗ ಮಾಡುವ ಎಂದು ಭರವಸೆ ನೀಡುತ್ತದೆ. ನಾಟಕದ ಪಾತ್ರಧಾರಿಗಳಾಗಿ ಬರುವವರಿಗೆ ಸರಿಯಾದ ಪಾಠ ಕಲಿಸಿ. ಈ ಬಾರಿ ಮೂಲಭೂತ ಸೌಕರ್ಯ, ರಸ್ತೆ, ಊರಿನ ಅಭಿವೃದ್ಧಿ ಕನಸು ಹೊತ್ತ ಪ್ರಾಮಾಣಿಕ ಮತ್ತು ನಿಷ್ಠಾವಂತ ಸದಸ್ಯರನ್ನೇ ಆಯ್ಕೆ ಮಾಡೋಣ ಎಂದು ಬ್ಯಾನರ್ ನಲ್ಲಿ ಬರೆಯಲಾಗಿದೆ.
ಮಾತ್ರವಲ್ಲದೆ ಈ ಬ್ಯಾನರ್ ಕೆಳಗಡೆ ಈ ಬ್ಯಾನರ್ ಉದ್ದೇಶಪೂರ್ವಕವಾಗಿ ತೆರವುಗೊಳಿಸಿದಲ್ಲಿ ಕಲ್ಕುಡ ಹಾಗೂ ಸುಬ್ರಹ್ಮಣ್ಯ ದೇವರಿಗೆ ಹರಕೆ ಹಾಕಲಾಗುವುದು ಎಂದು ಎಚ್ಚರಿಕೆಯನ್ನು ನೀಡಲಾಗಿದೆ.
ರಾಜಕಾರಣಿಗಳು ಗ್ರಾಮಗಳ ಅಭಿವೃದ್ಧಿ ಮಾಡುವುದು ಕಡಿಮೆಯಾಗಿದ್ದು, ತಮ್ಮ ಸ್ವಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ. ಮತದಾನ ಎಲ್ಲರ ಮೂಲಭೂತ ಹಕ್ಕು. ಹಾಗಾಗಿ ಸರಿಯಾದ ವ್ಯಕ್ತಿಗೆ ತಮ್ಮ ಮತವನ್ನು ಹಾಕಿ ಎನ್ನುವ ಉತ್ತಮ ಸಂದೇಶವನ್ನು ಬ್ಯಾನರ್ ನಲ್ಲಿ ಬರೆಯಲಾಗಿದೆ ಎನ್ನುತ್ತಾರೆ ಸ್ಥಳೀಯರು.