ಮಂಗಳೂರು: ಹಿರಿಯ ನಾಗರಿಕರು ಹಾಗೂ 45-60 ವರ್ಷದೊಳಗಿನ ದೀರ್ಘಕಾಲದ ರೋಗಗಳಿಂದ ಬಳಲುತ್ತಿರುವವರಿಗೆ ಕೋವಿಡ್ ಲಸಿಕೆ ನೀಡಲಾಗುತ್ತಿದ್ದು, ಕಡ್ಡಾಯವಾಗಿ ಎಲ್ಲರೂ ಲಸಿಕೆ ಪಡೆದುಕೊಳ್ಳಿ. ಲಸಿಕೆ ತೆಗೆದುಕೊಳ್ಳುವುದರಿಂದ ಯಾವುದೇ ಅಡ್ಡ ಪರಿಣಾಮಗಳಾಗುವುದಿಲ್ಲ, ವದಂತಿಗಳಿಗೆ ಕಿವಿಗೊಡಬೇಡಿ ಎಂದು ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಚಂದ್ರ ಬಾಯಿರಿ ಮನವರಿಕೆ ಮಾಡಿದರು.
ನಗರದ ಪ್ರೆಸ್ ಕ್ಲಬ್ನಲ್ಲಿ ಮಾತನಾಡಿದ ಅವರು, ಕನಿಷ್ಠ ಪಕ್ಷ ಮೊದಲ ಹಂತದ ಲಸಿಕೆಯನ್ನಾದರೂ ತೆಗೆದುಕೊಂಡಲ್ಲಿ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಆಗ ಸೋಂಕು ತಗುಲಿದರೂ ಸಾವಿನ ಭೀತಿ ಇರುವುದಿಲ್ಲ ಎಂದು ಹೇಳಿದರು.
ಕೊರೊನಾ ಮುಗಿಯಿತು ಎಂಬ ಭಾವನೆ ಎಲ್ಲರಲ್ಲೂ ಮೂಡುತ್ತಿರುವಾಗಲೇ ಇದೀಗ ಎಲ್ಲೆಡೆ ಎರಡನೇ ಅಲೆಯ ಭೀತಿ ಉಂಟಾಗಿದೆ. ಎರಡು ವಾರಗಳಿಂದೀಚೆಗೆ ದ.ಕ. ಜಿಲ್ಲೆ ಹಾಗೂ ಪಕ್ಕದ ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಂಡು ಬರುತ್ತಿದೆ. ದ.ಕ. ಜಿಲ್ಲೆಯಲ್ಲಿ ವಿದ್ಯಾರ್ಥಿಗಳಲ್ಲಿ ಅತೀ ಹೆಚ್ಚಿನ ಪ್ರಕರಣಗಳು ಕಂಡು ಬರುತ್ತಿವೆ. ಶಿಕ್ಷಣದ ಹಬ್ ಆಗಿರುವ ದ.ಕ. ಜಿಲ್ಲೆಯಲ್ಲಿ ಕೇರಳ ಸೇರಿದಂತೆ ವಿವಿಧ ರಾಜ್ಯಗಳಿಂದ ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಬರುತ್ತಿದ್ದು, ಕೇರಳದ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ಸೋಂಕಿತರಾಗಿದ್ದಾರೆ. ಅವರಿಂದ ಇನ್ನಿತರರಿಗೆ ಸೋಂಕು ತಗುಲಿ ಎರಡು ವಾರಗಳಿಂದೀಚೆಗೆ ಜಿಲ್ಲೆಯಲ್ಲೂ ಸೋಂಕಿತರ ಪ್ರಮಾಣದಲ್ಲಿ ಏರಿಕೆ ಕಂಡು ಬರುತ್ತಿದೆ. ಪರಿಣಾಮ ಒಂದಕ್ಕಿಂತ ಕಡಿಮೆ ಪಾಸಿಟಿವಿಟಿ ರೇಟ್ 1.81 ಆಗಿದೆ ಎಂದು ಡಾ. ರಾಮಚಂದ್ರ ಬಾಯಿರಿ ಹೇಳಿದರು.
ಓದಿ : ಆಡುತ್ತಾ ಆಡುತ್ತಾ ಸರ್ಕಲ್ ಇನ್ಸ್ಪೆಕ್ಟರ್ ಸಾವು: ಕ್ಷಣಮಾತ್ರದಲ್ಲಿ ಹಾರಿಹೋದ ಪ್ರಾಣಪಕ್ಷಿ - ವಿಡಿಯೋ
ಜೊತೆಗೆ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳು, ಮದುವೆ, ಸಭೆ ಸಮಾರಂಭಗಳು ನಡೆಯುತ್ತಿದ್ದು, ಸಾರ್ವಜನಿಕ ಪಾಲ್ಗೊಳ್ಳುವಿಕೆ ಮಿತಿ ಮೀರುತ್ತಿದೆ. ನಿಯಮ ಮೀರಿ ಜನರು ಸೇರುತ್ತಿದ್ದು, ಏನೂ ಆಗುವುದಿಲ್ಲ ಎಂಬ ಉಡಾಫೆ ಜನರಲ್ಲಿದೆ. ಇದರಿಂದ ಯುವ ಜನತೆಗೆ ಯಾವುದೇ ತೊಂದರೆಯಿಲ್ಲ. ಆದರೆ ಹಿರಿಯ ನಾಗರಿಕರು, ದೀರ್ಘಕಾಲದ ರೋಗಿಗಳು ಮಾತ್ರ ಇದರಿಂದ ತೊಂದರೆ ಅನುಭವಿಸುತ್ತಾರೆ. ಅವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಸಾವುನೋವುಗಳ ಸಂಭವ ಇರುತ್ತದೆ. ಈ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಲ್ಲಿ ಕೋವಿಡ್ ಎರಡನೇ ಅಲೆಯನ್ನು ತಡೆಯುವ ನಿಟ್ಟಿನಲ್ಲಿ ದ.ಕ.ಜಿಲ್ಲಾಧಿಕಾರಿ ನಿನ್ನೆಯಿಂದ ಸ್ವತಃ ಫೀಲ್ಡಿಗಿಳಿದು ಜವಾಬ್ದಾರಿ ವಹಿಸಿದ್ದಾರೆ. ಆದ್ದರಿಂದ ಎಲ್ಲರೂ ಈ ಕಾಯಿಲೆಯ ವಿರುದ್ಧ ಹೋರಾಟ ನಡೆಸಬೇಕಾಗಿದೆ ಡಾ.ರಾಮಚಂದ್ರ ಬಾಯಿರಿ ಹೇಳಿದರು.