ದಕ್ಷಿಣ ಕನ್ನಡ: ಕೋವಿಡ್ ಸೋಂಕಿನ ಭೀತಿಯ ಪರಿಣಾಮ ಲಾಕ್ಡೌನ್ನಿಂದ ಎರಡು ತಿಂಗಳುಗಳ ಕಾಲ ಸಂಪೂರ್ಣ ಮುಚ್ಚಲಾಗಿದ್ದ ಶ್ರೀಕ್ಷೇತ್ರ ಧರ್ಮಸ್ಥಳ ಸರ್ಕಾರದ ಆದೇಶದಂತೆ ಭಕ್ತರ ಪ್ರವೇಶಕ್ಕೆ ಮುಕ್ತವಾಗಿದೆ. ಇದೀಗ ಶ್ರೀ ಮಂಜುನಾಥ ಸ್ವಾಮಿಯ ದರ್ಶನಕ್ಕೆ ಭಕ್ತರ ಆಗಮನವಾಗುತ್ತಿದೆ.
ದೇವಳದಲ್ಲಿ ಕೊರೊನಾ ಸೋಂಕು ಹರಡದಂತೆ ಶುಚಿತ್ವಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತಿದ್ದು, ಗಂಟೆಗೊಮ್ಮೆ ಸ್ಯಾನಿಟೈಸೇಷನ್ ಮಾಡಿ ಶುಚಿಗೊಳಿಸಲಾಗುತ್ತಿದೆ. ದೇಗುಲದ ಒಳಭಾಗ ಮಾತ್ರವಲ್ಲದೆ, ಸುತ್ತಲಿನ ಪರಿಸರ, ಭಕ್ತರು ಓಡಾಡುವ ಜಾಗ, ಕಚೇರಿಗಳಲ್ಲಿಯೂ ಸ್ಯಾನಿಟೈಸೇಷನ್ ಮಾಡಿ, ಶುಚಿಗೊಳಿಸಲಾಗುತ್ತಿದೆ.
ದೇಗುಲದ ಬಾಗಿಲಲ್ಲೇ ಭಕ್ತರ ಪ್ರವೇಶಕ್ಕೆ ಮುನ್ನ ಸ್ಕ್ರೀನಿಂಗ್ ಮಾಡಲಾಗುತ್ತಿದ್ದು ಜ್ವರ, ಶೀತ, ಕೆಮ್ಮು ಮುಂತಾದ ಲಕ್ಷಣವುಳ್ಳವರಿಗೆ ದೇವಳ ಪ್ರವೇಶಕ್ಕೆ ಅನುಮತಿ ನಿರಾಕರಿಸಲಾಗುತ್ತಿದೆ. ಮಾಸ್ಕ್ ಕಡ್ಡಾಯಗೊಳಿಸಲಾಗಿದ್ದು, ಭಕ್ತರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆಯೂ ಎಚ್ಚರಿಕೆ ವಹಿಸಲಾಗುತ್ತಿದೆ. ಈ ಬಗ್ಗೆ ಭಕ್ತರಿಗೆ ಎಚ್ಚರಿಕೆ ವಹಿಸಲು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ದೇವಳದಲ್ಲಿ ಭಕ್ತರಿಗೆ ಸರ್ಕಾರದ ನಿಯಮದಂತೆ ತೀರ್ಥ ಪ್ರಸಾದ ವಿತರಣೆ ಮಾಡಲಾಗುತ್ತಿಲ್ಲ. ಆದರೆ ಗಂಧ ಪ್ರಸಾದ ವಿತರಣೆ ಇದೆ.
ಲಾಕ್‌ಡೌನ್ ನಿಯಮ ಸಡಿಲಿಕೆ ಆಗಿರುವುದರಿಂದ, ಸಾಕಷ್ಟು ಬಸ್ ವ್ಯವಸ್ಥೆ ಇಲ್ಲದ ಕಾರಣ ಭಕ್ತರ ಸಂಖ್ಯೆ ವಿರಳವಾಗಿದೆ. ಆದರೆ ಬೆಂಗಳೂರು ಕಡೆಯಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಇತರೆ ಜಿಲ್ಲೆಗಳಿಂದ ಬರುವ ಭಕ್ತರ ಸಂಖ್ಯೆಯಲ್ಲಿ ಇನ್ನಷ್ಟೇ ಶುರುವಾಗಬೇಕಿದೆ. ಹಾಗಾಗಿ ದೇವಳದ ವಸತಿ ನಿಲಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೂಂಗಳು ಖಾಲಿ ಇವೆ. ಆದರೆ ವಸತಿ ನಿಲಯಗಳಲ್ಲಿ ಉಳಿದುಕೊಳ್ಳುವವರ ಶುಚಿತ್ವದ ಬಗ್ಗೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ವಹಿಸಲಾಗುತ್ತಿದೆ.
ಈ ಬಗ್ಗೆ ಧರ್ಮಸ್ಥಳ ಧರ್ಮಾಧಿಕಾರಿಯವರ ಆಪ್ತಸಹಾಯಕ ಎ.ವಿ.ಶೆಟ್ಟಿ ಈಟಿವಿ ಭಾರತದೊಂದಿಗೆ ಮಾತನಾಡಿ, ಸರ್ಕಾರದ ಆದೇಶದಂತೆ ಈಗಾಗಲೇ ತೆರೆದಿದ್ದು, ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದೇವೆ. ಅಲ್ಲದೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ನಿರ್ದೇಶನದಂತೆ ಕೋವಿಡ್-19 ಸೋಂಕಿನ ಭೀತಿಯ ಹಿನ್ನೆಲೆಯಲ್ಲಿ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ನಿರ್ವಹಿಸಲಾಗುತ್ತಿದೆ ಎಂದರು.
ಆದರೂ ಸುಮಾರು ಶೇ 40 ರಷ್ಟು ಭಕ್ತರು ಸರ್ಕಾರದ ನಿಯಮಗಳನ್ನು ಪಾಲಿಸುತ್ತಿಲ್ಲ. ಅಲ್ಲದೆ 10 ವರ್ಷಕ್ಕಿಂತ ಕೆಳಗಿನ ವಯಸ್ಸಿನ ಮಕ್ಕಳ ಆಗಮನಕ್ಕೆ ದೇವಾಲಯದಲ್ಲಿ ನಿರ್ಬಂಧ ವಿಧಿಸಿದ್ದರೂ, ಸಾಕಷ್ಟು ಮಂದಿ ಈ ನಿಯಮಗಳನ್ನು ಪಾಲಿಸುತ್ತಿಲ್ಲ ಎಂದು ಹೇಳಿದರು.
ನೇತ್ರಾವತಿ ಸ್ನಾನಘಟ್ಟದಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ. ಭಕ್ತರು ಎಲ್ಲೆಂದರಲ್ಲಿ ಉಗುಳದಂತೆ ಸೂಚನಾ ಫಲಕಗಳನ್ನು ಹಾಕಲಾಗಿದೆ. ಮುಂದಿನ ದಿನಗಳಲ್ಲಿ ಅದಕ್ಕಾಗಿಯೇ ಬೇಸಿನ್ಗಳನ್ನು ಇಡುವ ವ್ಯವಸ್ಥೆ ಮಾಡಲಾಗುತ್ತದೆ. ಅಲ್ಲದೆ ಇತರೆಡೆ ಇರುವ ವಾಷ್ ಬೇಸಿನ್ಗಳನ್ನು ಗಂಟೆಗೊಮ್ಮೆ ಶುಚಿಗೊಳಿಸಲಾಗುತ್ತಿದೆ ಎಂದು ವಿವರಿಸಿದರು.
ಮುಡಿ ತೆಗೆಯುವಲ್ಲಿಯೂ ಬಹಳಷ್ಟು ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸಿಬ್ಬಂದಿಯನ್ನು ಕಡಿತಗೊಳಿಸಲಾಗಿದೆ. ಮುಡಿ ತೆಗೆಯುವಾಗ ಒಮ್ಮೆ ಬಳಸಿದ ಬಟ್ಟೆಯನ್ನು ಮತ್ತೊಮ್ಮೆ ಬಳಸಲಾಗುತ್ತಿಲ್ಲ. ಶುಚಿತ್ವಕ್ಕೆ ಹೆಚ್ಚಿನ ಗಮನಕೊಡುವ ಹಿನ್ನೆಲೆಯಲ್ಲಿ ಡೆಟಾಲ್, ಕ್ರಿಮಿನಾಶಕಗಳನ್ನು ಬಳಸಿ ಅರ್ಧಗಂಟೆಗೊಮ್ಮೆ ಸ್ಯಾನಿಟೈಸೇಷನ್ ಮಾಡಿ ಶುಚಿಗೊಳಿಸಲಾಗುತ್ತಿದೆ ಎಂದು ಎ.ವಿ.ಶೆಟ್ಟಿ ಮಾಹಿತಿ ನೀಡಿದರು.