ಮಂಗಳೂರು: ಶಿವಮೊಗ್ಗದಲ್ಲಿ ಹತ್ಯೆಯಾದ ಬಜರಂಗದಳದ ಕಾರ್ಯಕರ್ತ ಹರ್ಷ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿರುವ ಮಂಗಳೂರು ಮುಸ್ಲಿಂ ಪೇಜ್ ಬಗ್ಗೆ ಮಂಗಳೂರು ಪೊಲೀಸರು ಸುಮೋಟೊ ಕೇಸ್ ದಾಖಲಿಸಿದ್ದಾರೆ.
ವಿವಾದಾತ್ಮಕ ಪೋಸ್ಟ್ ಮಾಡಿದವರು ಯಾರೇ ಆದರೂ, ಅವರು ಎಷ್ಟೇ ಪ್ರಭಾವಿಯಾದರೂ ಅವರ ಆಯುಷ್ಯ ವೃದ್ಧಿಯಾಗೋಲ್ಲ ಎಂದು ಪೋಸ್ಟ್ನಲ್ಲಿ ಬರೆಯಲಾಗಿದೆ. ಅಲ್ಲದೆ ಕೊಲೆಯ ಸತ್ಯಾಸತ್ಯತೆ ಬಯಲಾಗಬೇಕಿದ್ದಲ್ಲಿ ತನಿಖೆ ಮಾಡಿಸಿ ಎಂದು ಮುಸ್ಲಿಂ ಪೇಜ್ನಲ್ಲಿ ಉಲ್ಲೇಖಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಆಕ್ಷೇಪಾರ್ಹ ಹಾಗೂ ಬೆದರಿಕೆ ಒಡ್ಡುವ ರೀತಿಯಲ್ಲಿ ಪೋಸ್ಟ್ ಮಾಡಿರುವ ಮಂಗಳೂರು ಮುಸ್ಲಿಮ್ಸ್ ಪೇಜ್ ಮೇಲೆ ಮಂಗಳೂರು ಪೊಲೀಸರು ಸೆನ್ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಪ್ರಕರಣ ದಾಖಲಿಸಲಾಗಿದೆ. ಜೊತೆಗೆ ಈ ಪೋಸ್ಟ್ ಅನ್ನು ಲೈಕ್, ಶೇರ್ ಹಾಗೂ ಕಮೆಂಟ್ಸ್ ಗಳನ್ನು ಮಾಡಿದವರೂ ಅಪರಾಧಿಗಳಾಗಿದ್ದು, ಅವರ ಮೇಲೆಯೂ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಹೇಳಿದರು.
ಜೊತೆಗೆ 100ಕ್ಕೂ ಅಧಿಕ ಸಂಘಟನೆಗಳು, 1,064 ವ್ಯಕ್ತಿಗಳ ಸಾಮಾಜಿಕ ಜಾಲತಾಣಗಳನ್ನು ಮಂಗಳೂರು ಪೊಲೀಸ್ ತಂಡ ಗಮನಿಸುತ್ತಿದೆ. ಎರಡು ತಿಂಗಳಿನಿಂದ ಕೆಲವೊಂದು ಸಾಮಾಜಿಕ ಜಾಲತಾಣಗಳ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ.
ಇದನ್ನೂ ಓದಿ : ರೋಟರಿ ಚಿತಾಗಾರದಲ್ಲಿ ಹರ್ಷ ಅಂತ್ಯಕ್ರಿಯೆ: ಈಶ್ವರಪ್ಪ, ಸಂಸದ ರಾಘವೇಂದ್ರ ಭಾಗಿ
ಅಲ್ಲದೇ ಕೋಮು ಭಾವನೆ ಪ್ರಸಾರ ಮಾಡುವ, ಜಾತಿ ಧರ್ಮಗಳ ಹೆಸರಿನಲ್ಲಿ ಕೋಮು ಪ್ರಚಾರ ಮಾಡುವ ವಿವಿಧ ಸಂಘಟನೆಗಳು, ರಾಜಕೀಯ ಪಕ್ಷದ ನಾಯಕರ ಪೋಸ್ಟ್ಗಳ ಮೇಲೆಯೂ ಗಮನ ಹರಿಸಲಾಗಿದೆ. ಆದ್ದರಿಂದ ಸಾಮಾಜಿಕ ಜಾಲತಾಣವನ್ನು ದುರ್ಬಳಕೆ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸ್ ಕಮಿಷನರ್ ಎಚ್ಚರಿಕೆ ನೀಡಿದರು.