ಬೆಳ್ತಂಗಡಿ(ದಕ್ಷಿಣ ಕನ್ನಡ): ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಅವಹೇಳನಕಾರಿ ರೀತಿಯಲ್ಲಿ ಮಾತನಾಡಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ನವೆಂಬರ್ 19ರಂದು ದೂರು ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಪಿ ಬಿಜೆಪಿ ಕಾರ್ಯಕರ್ತನ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಕೋರಿಗದ್ದೆ ನಿವಾಸಿ, ವೃತ್ತಿಯಲ್ಲಿ ಸೆಲೂನ್ ಅಂಗಡಿಯಲ್ಲಿ ಕೆಲಸ ಮಾಡುವ ಕೊಕ್ಕಡದ ಬಿಜೆಪಿ ಕಾರ್ಯಕರ್ತ ರಜಿತ್ ಕೊಕ್ಕಡ ಎಂಬವರು ಆಡಿಯೋ ಹರಿಬಿಟ್ಟಿದ್ದಾರೆ ಎಂದು ಬೆಳ್ತಂಗಡಿ ಕಾಂಗ್ರೆಸ್ ಕಾರ್ಯಕರ್ತ ಹಕಿಮ್ ಕೊಕ್ಕಡ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಐಪಿಸಿ 1860 (u/s 153A,504,505(2)) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಭಿದೇವ್, ಯುವ ಇಂಟಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಗೌಡ ಸವಣಾಲು, ಸುಧೀರ್ ದೇವಾಡಿಗ, ರಬಿನ್ ಹಾಗು ಮೋಹಿತ್ ಎಂಬವರು ಪೊಲೀಸರಿಗೆ ದೂರು ನೀಡುವ ಸಂದರ್ಭದಲ್ಲಿ ಜೊತೆಗಿದ್ದರು.
ಮತ್ತೊಂದು ಪ್ರಕರಣ: ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದ ವ್ಯಕ್ತಿಯ ವಿರುದ್ಧ ಬೆಂಗಳೂರಿನ ವೈಟ್‌ಫೀಲ್ಡ್ ಸೆನ್ ಪೊಲೀಸ್ ಠಾಣೆಯಲ್ಲಿ ಐಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: ಸಿಎಂ, ಕುಟುಂಬ ಸದಸ್ಯರ ಅವಹೇಳನ ಆರೋಪ: ಬಿಜೆಪಿ ಕಾರ್ಯಕರ್ತೆ ಬಂಧನ, ಬಿಡುಗಡೆ