ಪುತ್ತೂರು (ದಕ್ಷಿಣ ಕನ್ನಡ): ರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಬಹುಮಾನ ಸಿಗದ ವಿಚಾರದಲ್ಲಿ ಖಿನ್ನತೆಗೊಳಗಾಗಿ ಪ್ರತಿಷ್ಠಿತ ಕಾಲೇಜೊಂದರ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸಂಪ್ಯದಲ್ಲಿ ನಡೆದಿದೆ. ಪುತ್ತೂರಿನ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ನಿಶಾ(17) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಆಗಿದ್ದಾರೆ.
ಕಳೆದ ಎರಡು ವಾರಗಳ ಹಿಂದೆ ಬಿಹಾರದಲ್ಲಿ ನಡೆದಿದ್ದ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ರನ್ನಿಂಗ್ ರೇಸ್ ಸ್ಪರ್ಧೆಯಲ್ಲಿ ನಿಶಾ ಭಾಗವಹಿಸಿದ್ದರು. ರನ್ನಿಂಗ್ ರೇಸ್‌ನಲ್ಲಿ ಬಹುಮಾನ ಸಿಗದಿದ್ದಕ್ಕೆ ಬೇಸರಗೊಂಡಿದ್ದ ನಿಶಾ ಅವರು ಬಳಿಕ ಖಿನ್ನತೆಗೊಳಗಾಗಿ ತೋಟಕ್ಕೆ ಸಿಂಪಡಿಸುವ ಕೀಟನಾಶವನ್ನು ಸೇವಿಸಿದ್ದಾರೆ ಎನ್ನಲಾಗಿದೆ. ನಿಶಾ ತೀವ್ರ ವಾಂತಿ ಮಾಡಿಕೊಳ್ಳುತ್ತಿದ್ದ ಕಾರಣಕ್ಕೆ ಮನೆಯವರು ವಿಚಾರಿಸಿದಾಗ ಕೀಟನಾಶಕ ಸೇವಿಸಿದ ವಿಚಾರ ಗೊತ್ತಾಗಿದೆ.
ಕೂಡಲೇ ನಿಶಾಳನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಪ್ರಾಥಮಿಕ ಚಿಕಿತ್ಸೆಯ ಬಳಿಕ ಹೆಚ್ಚಿನ ತಪಾಸಣೆಗಾಗಿ ಪುತ್ತೂರಿನಿಂದ ಮಂಗಳೂರಿಗೆ ಕೊಂಡೊಯ್ಯುವಂತೆ ವೈದ್ಯರು ಶಿಫಾರಸು ಮಾಡಿದ್ದರು. ವೈದ್ಯರ ಸೂಚನೆ ಮೆರೆಗೆ ನಿಶಾಳನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಕಳೆದ ಒಂದು ವಾರದಿಂದ ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಿಶಾ ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ರಾತ್ರಿ ಮೃತಪಟ್ಟಿದ್ದಾರೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ: ಸಾಲಬಾಧೆ, ಕಿರುಕುಳ ಆರೋಪ; ತುಮಕೂರಲ್ಲಿ ಒಂದೇ ಕುಟುಂಬದ ಐವರು ಆತ್ಮಹತ್ಯೆ
ಕಾಲೇಜಿಗೆ ಹೋಗೋದು ಬೇಡ ಎಂದಿದ್ದಕ್ಕೆ ಯುವತಿ ಆತ್ಮಹತ್ಯೆ(ರಾಯಚೂರು): ಅಣ್ಣನ ಮದುವೆ ಹತ್ತಿರ ಬರುತ್ತಿದೆ, ಸದ್ಯ ಕಾಲೇಜಿಗೆ ಹೋಗೋದು ಬೇಡ ಎಂದು ತಾಯಿ ಹೇಳಿದ್ದಕ್ಕೆ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಯಚೂರು ನಗರದ ಗದ್ವಾಲ್ ರಸ್ತೆಯಲ್ಲಿನ ಎಂವಿಜಿ ಕಾಲೊನಿಯಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ. 20 ವರ್ಷದ ಶ್ರೇಯಾ ಎನ್ನುವ ಯುವತಿ ಮನೆಯಲ್ಲಿಯೇ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮದುವೆ ಸಮಾರಂಭ ಇರುವುದರಿಂದ ಮನೆಯಲ್ಲಿ ಕೆಲಸ ಕಾರ್ಯಗಳು ಹೆಚ್ಚಿರುತ್ತವೆ. ಆದ್ದರಿಂದ ಸ್ವಲ್ಪ ದಿನ ಕಾಲೇಜಿಗೆ ಹೋಗುವುದು ಬೇಡ ಎಂದು ಮಗಳಿಗೆ ತಾಯಿ ಹೇಳಿದ್ದಾಳೆ. ಇದರಿಂದ ನೊಂದ ಯುವತಿ ರೆಡಿಯಾಗಲೆಂದು ಕೋಣೆಗೆ ಹೋದವಳು, ಕೆಲವು ಗಂಟೆಗಳು ಕಳೆದರೂ ಹೊರಗೆ ಬಾರದೇ ಇರುವುದನ್ನು ಕಂಡು ಅನುಮಾನಗೊಂಡ ಮನೆಯವರು ಬಾಗಿಲು ತೆರೆದು ನೋಡಿದಾಗ ಶ್ರೇಯಾ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ.