ಮಂಗಳೂರು: ಮಂಗಳೂರು ಮೂಲದ ದಂತ ವೈದ್ಯೆಯೊಬ್ಬರು ಪುಣೆಯ ಪಿಂಪ್ರಿಯ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ. ಡಾ. ಜೈಶಾ ( 27) ಮೃತಪಟ್ಟವರು. ಮಂಗಳೂರಿನ ವೆಲೆನ್ಸಿಯಾ ನಿವಾಸಿಯಾಗಿದ್ದು, ಪುಣೆಯ ಪಿಂಪ್ರಿಯಲ್ಲಿ ದಂತ ವೈದ್ಯೆಯಾಗಿದ್ದರು. ಮಂಗಳೂರಿನಲ್ಲಿ ನೆಲೆಸಿದ್ದ ಇವರನ್ನು ಪುಣೆಯ ಉದ್ಯಮಿ ರಿಮಿನ್ ಆರ್ ಕುರಿಯಾಕೋಸ್ ಅವರಿಗೆ ಒಂದೂವರೆ ವರ್ಷದ ಹಿಂದೆ ವಿವಾಹ ಮಾಡಿಕೊಡಲಾಗಿತ್ತು. ಇವರು ಮಂಗಳೂರಿನ ಜಾನ್ ಥಾಮಸ್ ಮತ್ತು ಉಷಾ ಜಾನ್ ದಂಪತಿಯ ಪುತ್ರಿಯಾಗಿದ್ದಾರೆ.
ಜೈಶಾ ಅವರು ಸ್ಕೂಟರ್ನಲ್ಲಿ ಪುಣೆಯ ಪಿಂಪ್ರಿಯಲ್ಲಿ ಮಧ್ಯಾಹ್ನ ಊಟ ಮುಗಿಸಿ ಕ್ಲಿನಿಕ್‌ಗೆ ಹೋಗುತ್ತಿದ್ದ ವೇಳೆ ಅವರು ಸಂಚರಿಸುತ್ತಿದ್ದ ಸ್ಕೂಟರ್ಗೆ ಟ್ರಕ್ ಢಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ.
ಪಾರ್ಥಿವ ಶರೀರವನ್ನು ಪುಣೆಯಲ್ಲಿರುವ ಅವರ ಮನೆಯಲ್ಲಿ ಸಾರ್ವಜನಿಕರ ದರ್ಶನಕ್ಕಾಗಿ ಇರಿಸಿದ ನಂತರ ರಸ್ತೆ ಮಾರ್ಗವಾಗಿ ಮಂಗಳೂರಿಗೆ ತರಲಾಗಿದೆ. ಬುಧವಾರದಂದು ಮಂಗಳೂರಿನ ಜೆಪ್ಪುವಿನ ಸೈಂಟ್ ಆಂಟೋನಿ ಜಾಕೋಬೈಟ್ ಸಿರಿಯನ್ ಕೆಥೆಡ್ರಲ್‌ನ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.