ಮಂಗಳೂರು: ಮೂಡುಬಿದಿರೆ ತಾಲೂಕಿನ ಪುರಸಭೆ ಹಾಗೂ ಗ್ರಾಮಾಂತರ ವ್ಯಾಪ್ತಿಯಲ್ಲಿ ಡೆಂಗ್ಯೂ ಹಾಗೂ ಮಲೇರಿಯಾ ಪ್ರಕರಣಗಳು ಮಳೆಗಾಲದ ಆರಂಭದಿಂದಲೇ ಕಂಡು ಬರುತ್ತಿದ್ದು, ಆರೋಗ್ಯಾಧಿಕಾರಿಗಳು ಈ ಬಗ್ಗೆ ಎಚ್ಚರಿಕೆ ವಹಿಸಿ ಸೂಕ್ತ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದ್ದಾರೆ.
ಸಾಂಕ್ರಾಮಿಕ ರೋಗಗಳು ಹರಡದಂತೆ ತಡೆಯಲು ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕೋವಿಡ್ ಸೋಂಕಿನ ಪರಿಣಾಮ ಕಟ್ಟಡ ಕಾಮಗಾರಿಗಳು ಬಹು ದಿನಗಳಿಂದ ನಿಂತಿದ್ದು, ಇಂತಹ ಕಟ್ಟಡದಲ್ಲಿ ನಿಂತ ನೀರಿನಲ್ಲಿ ರೋಗಕಾರಕ ಸೊಳ್ಳೆಗಳು ಉತ್ಪತ್ತಿಯಾಗುವ ಸಾಧ್ಯತೆ ಇದೆ. ಅಧಿಕಾರಿಗಳು ತಕ್ಷಣವೇ ಇಂತಹ ತಾಣಗಳನ್ನು ಗುರುತಿಸಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಮೂಡುಬಿದಿರೆ ತಾಲೂಕು ಆರೋಗ್ಯಾಧಿಕಾರಿ ಡಾ.ಸುಜಯ್ ಕುಮಾರ್ ಮಾತನಾಡಿ, ನಗರಕ್ಕಿಂತ ಗ್ರಾಮೀಣ ಪ್ರದೇಶಗಳಲ್ಲಿ ಡೆಂಗ್ಯು ಪ್ರಕರಣಗಳು ಹೆಚ್ಚುತ್ತಿವೆ. ಮೂಡುಬಿದಿರೆ ಪುರಸಭೆ ವ್ಯಾಪ್ತಿಯಲ್ಲಿ 6 ಶಂಕಿತ ಡೆಂಗ್ಯು ಹಾಗೂ 1 ಪ್ರಕರಣ ಖಚಿತಗೊಂಡಿದೆ.
ಪಾಲಡ್ಕದಲ್ಲಿ 2 ಶಂಕಿತ, ನೆಲ್ಲಿಕಾರ್ ನಲ್ಲಿ 1 ಶಂಕಿತ, ಬೆಳುವಾಯಿಯಲ್ಲಿ1, ಶಿರ್ತಾಡಿಯಲ್ಲಿ ಆರು ಶಂಕಿತ ಹಾಗೂ ಮೂರು ಖಚಿತ ಡೆಂಗ್ಯು ಪ್ರಕರಣಗಳು ಪತ್ತೆಯಾಗಿದೆ. ಅಲ್ಲದೆ ಕಲ್ಲಮುಂಡ್ಕೂರಿನಲ್ಲಿ 7 ಶಂಕಿತ ಹಾಗೂ 1 ಖಚಿತ ಡೆಂಗ್ಯು ಪ್ರಕರಣ ಪತ್ತೆಯಾಗಿದೆ. ಅಲ್ಲದೇ ಬೆಳುವಾಯಿಯಲ್ಲಿ 1, ಮೂಡುಬಿದಿರೆಯಲ್ಲಿ 2 ಮಲೇರಿಯಾ ಪ್ರಕರಣಗಳು ಖಚಿತಗೊಂಡಿವೆ ಎಂದು ಮಾಹಿತಿ ನೀಡಿದರು.