ಮಂಗಳೂರು: ನಗರದ ಲೇಡಿಗೋಷನ್ ಆಸ್ಪತ್ರೆಯಲ್ಲಿ ಮೇ ತಿಂಗಳೊಂದರಲ್ಲಿ 50 ಕೊರೊನಾ ಸೋಂಕಿತೆ ಗರ್ಭಿಣಿಯರಿಗೆ ಸುಸೂತ್ರವಾಗಿ ಹೆರಿಗೆ ನಡೆಸಲಾಗಿದೆ.
ಕೊರೊನಾದ ಮೊದಲ ಅಲೆಯ ಸಂದರ್ಭದಲ್ಲಿಯೇ ಲೇಡಿಗೋಷನ್ ಆಸ್ಪತ್ರೆಯಲ್ಲಿ ಕೋವಿಡ್ ಮೆಟರ್ನಿಟಿ ಬ್ಲಾಕ್ ಆರಂಭಿಸಲಾಗಿದೆ. ಅದಕ್ಕೆ 15 ಆಕ್ಸಿಜನ್ ಬೆಡ್ಗಳು, 5 ಆಕ್ಸಿಜನ್ ರಹಿತ ಬೆಡ್ಗಳು ಹಾಗೂ 14 ಸಂಶಯಿತ ಕೋವಿಡ್ ಬೆಡ್ಗಳು ಸೇರಿ ಒಟ್ಟು 53 ಬೆಡ್ಗಳನ್ನು ಅಳವಡಿಸಲಾಗಿತ್ತು. ಜೊತೆಗೆ ಸಾಮಾನ್ಯ ಹಾಗೂ ಸಿಸೇರಿಯನ್ ಬ್ಲಾಕ್ ಎಂಬ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು.
ಮೊದಲ ಅಲೆಯ ಕೊರೊನಾ ಸೋಂಕಿನ ಕಾಲದಲ್ಲಿ ಸೋಂಕಿತೆಯರ ಹೆರಿಗೆಯ ಪ್ರಮಾಣ 45ರ ಗಡಿ ದಾಟಿರಲಿಲ್ಲ. ಆದರೆ, ಎರಡನೇ ಅಲೆಯಲ್ಲಿ ಹೆಚ್ಚಿನ ಮಟ್ಟದಲ್ಲಿ ಗರ್ಭಿಣಿಯರಿಗೆ ಸೋಂಕು ತಗುಲಿದ್ದು, ಮೇ ತಿಂಗಳ 24 ದಿನಗಳಲ್ಲಿಯೇ ಲೇಡಿಗೋಷನ್ ಆಸ್ಪತ್ರೆಯಲ್ಲಿ 24 ಸಾಮಾನ್ಯ ಹಾಗೂ 27 ಶಸ್ತ್ರಚಿಕಿತ್ಸೆಯ ಮೂಲಕ ಸೋಂಕಿತ ಗರ್ಭಿಣಿಯರಿಗೆ ಹೆರಿಗೆ ಮಾಡಿಸಲಾಗಿದೆ.
ಕೋವಿಡ್ ಬಳಿಕ ಈವರೆಗೆ ಒಟ್ಟು 331 ಸೋಂಕಿತ ಗರ್ಭಿಣಿಯರು ಲೇಡಿಗೋಷನ್ ಆಸ್ಪತ್ರೆಯಲ್ಲಿ ಹೆರಿಗೆಗಾಗಿ ದಾಖಲಾಗಿದ್ದಾರೆ. ಅವರಲ್ಲಿ 62 ಮಂದಿ ನಾರ್ಮಲ್ ಹಾಗೂ 95 ಶಸ್ತ್ರಚಿಕಿತ್ಸಾ ಹೆರಿಗೆಯಾಗಿದೆ. ಸಂಶಯಿತ ಕೆಲವು ಪ್ರಕರಣಗಳು ಆ ಬಳಿಕ ನೆಗೆಟಿವ್ ಬಂದಿತ್ತು. ಇದರಲ್ಲಿ ಮೂರು ನವಜಾತ ಶಿಶುಗಳಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಆದ್ದರಿಂದ ಮಕ್ಕಳಿಗಾಗಿ ಪ್ರತ್ಯೇಕ ಕೋವಿಡ್ ನವಜಾತ ಶಿಶುಗಳ ತೀವ್ರ ನಿಗಾ ಘಟಕದ ವ್ಯವಸ್ಥೆ ಮಾಡಲಾಗಿದೆ.