ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ತರಗತಿಗಳು ನವೆಂಬರ್ 17 ರಿಂದ ಆರಂಭಗೊಳ್ಳಲಿವೆ ಎಂದು ದ.ಕ ಜಿಲ್ಲಾ ಅಪರ ಜಿಲ್ಲಾಧಿಕಾರಿ ಎಂ. ಜೆ ರೂಪ ಮಾಹಿತಿ ನೀಡಿದ್ದಾರೆ.
ಕೊರೊನಾ ಹಿನ್ನೆಲೆಯಲ್ಲಿ ವಿಶ್ವವಿದ್ಯಾನಿಲಯ, ಖಾಸಗಿ ವಿಶ್ವವಿದ್ಯಾನಿಲಯ, ಸರ್ಕಾರಿ, ತಾಂತ್ರಿಕ, ಡಿಪ್ಲೋಮಾ, ಅನುದಾನ, ಅನುದಾನ ರಹಿತ ಕಾಲೇಜುಗಳ ಶೈಕ್ಷಣಿಕ ಚಟುವಟಿಕೆಗಳನ್ನು ಪ್ರಾರಂಭಿಸಲು ಮಾರ್ಗಸೂಚಿಯ ಕುರಿತ ಸಭೆಯಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಬರುವ ಅಂತಿಮ ವರ್ಷದ ಪದವಿ ಹಾಗೂ ಸ್ನಾತಕೋತ್ತರ ಪದವಿ ತರಗತಿಗಳನ್ನು ನವೆಂಬರ್ 17 ರಿಂದ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವುದರೊಂದಿಗೆ ಪ್ರಾರಂಭಿಸಬೇಕು. ಪ್ರತೀ ದಿನ ಕಾಲೇಜು ಪ್ರವೇಶಕ್ಕೆ ವಿದ್ಯಾರ್ಥಿಗಳು ಹಾಜರಾಗಲು ವಿದ್ಯಾರ್ಥಿಗಳ ಗುಂಪನ್ನು ವಿಂಗಡಣೆ ಮಾಡಿ ದಿನ ನಿತ್ಯ 50% ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಮಾಡಿಕೊಡಬೇಕು ಹಾಗೂ ಉಳಿದ ಪ್ರಥಮ, ದ್ವಿತೀಯ, ಪದವಿ ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿಗಳನ್ನು ನಡೆಸುವಂತೆ ಸೂಚಿಸಿದರು.
ತರಗತಿಗೆ ಹಾಜರಾಗುವ ಬೋಧಕರು, ವಿದ್ಯಾರ್ಥಿಗಳು ಹಾಗೂ ಇತರೆ ಸಿಬ್ಬಂದಿಗಳು ಕಡ್ಡಾಯವಾಗಿ 3 ದಿನಗಳ ಮುಂಚಿತವಾಗಿ ಕೊರೊನಾ ಪರೀಕ್ಷೆಯನ್ನು ಮಾಡಿಸಿ, ಪರೀಕ್ಷಾ ವರದಿ ನೆಗೆಟಿವ್ ಇದ್ದಲ್ಲಿ ಮಾತ್ರ ವಿಶ್ವವಿದ್ಯಾಲಯ ಅಥವಾ ಕಾಲೇಜುಗಳಿಗೆ ಹಾಜರಾಗಬೇಕು. ಯಾವುದೇ ಆರೋಗ್ಯ ಸಮಸ್ಯೆಗಳು ಕಂಡುಬಂದಲ್ಲಿ 1077ನ್ನು ಸಂಪರ್ಕಿಸಬಹುದು ಎಂದರು.