ಮಂಗಳೂರು : ಇಂದು ಹೊಸ ವರ್ಷದ ಸಂಭ್ರಮ. ಎಲ್ಲರೂ ಹೊಸ ವರ್ಷವನ್ನು ಸ್ವಾಗತಿಸುತ್ತಾ, ವರ್ಷಪೂರ್ತಿ ಸುಖ-ಶಾಂತಿ ನೆಲೆಸಲೆಂಬಂತೆ ದೇವಾಲಯಗಳಲ್ಲಿ ವಿಶೇಷ ಪೂಜೆಗಳನ್ನು ಸಲ್ಲಿಸುತ್ತಾರೆ. ಆದರೆ ಭಕ್ತರೊಬ್ಬರು ಹೊಸ ವರ್ಷದ ಹಿನ್ನೆಲೆಯಲ್ಲಿ ಧರ್ಮಸ್ಥಳ ಶ್ರೀಕ್ಷೇತ್ರವನ್ನೇ ಫಲ-ಪುಷ್ಪಗಳಿಂದ ವಿಶೇಷವಾಗಿ ಅಲಂಕರಿಸಿದ್ದಾರೆ.
ಬೆಂಗಳೂರಿನ ಉದ್ಯಮಿ ಗೋಪಾಲ್ ರಾವ್ ಆನಂದ, ಶರವಣನ್ ಕಳೆದ 15 ವರ್ಷಗಳಿಂದ ಹೊಸವರ್ಷದ ಸಂದರ್ಭ ಮಂಜುನಾಥ ಸ್ವಾಮಿಗೆ ಅಲಂಕಾರ ಸೇವೆ ಮಾಡುತ್ತ ಬಂದಿದ್ದಾರೆ. ಅದರಂತೆ ಈ ಬಾರಿಯೂ ದೇವಸ್ಥಾನದ ಮುಂಭಾಗ, ಒಳಾಂಗಣದ ಗರ್ಭಗುಡಿಯ ಮುಂಭಾಗ, ಕಂಬಗಳು ಸೇರಿದಂತೆ ಪ್ರಮುಖ ಸ್ಥಳಗಳನ್ನು ಹೂ, ಹಣ್ಣು ಮತ್ತು ತರಕಾರಿಗಳಿಂದ ಸಿಂಗರಿಸಿದ್ದಾರೆ.
ಅದಕ್ಕಾಗಿ 15 ಲೋಡ್ ಗಿಂತ ಅಧಿಕ ತರಕಾರಿ, ಆರ್ಕಿಡ್ ಪುಷ್ಪ, ರುದ್ರಾಕ್ಷಿ, ಗುಲಾಬಿ, ಸೇವಂತಿಗೆ ಹಿಂಗಾರ, ಸುಗಂಧರಾಜ ಮೊದಲಾದ ಹೂಗಳು, ಬಾಳೆಗೊನೆ ಸೇಬು, ಅಡಕೆ, ಜೋಳ, ಬದನೆಗಳನ್ನು ಬಳಸಲಾಗಿದೆ. 100ಕ್ಕೂ ಅಧಿಕ ಮಂದಿಯ ತಂಡ ಆರು ದಿನಗಳಿಂದ ಅಲಂಕಾರದಲ್ಲಿ ತೊಡಗಿಸಿಕೊಂಡಿದ್ದರು. ಆದ್ದರಿಂದ ಇಂದು ಧರ್ಮಸ್ಥಳ ಕ್ಷೇತ್ರ ವಿಶೇಷ ಅಲಂಕಾರ ಭಕ್ತರ ಕಣ್ಮನ ಸೆಳೆಯುತ್ತಿದೆ.
ಇದನ್ನೂ ಓದಿ : ದಾವಣಗೆರೆ: ಹೊಸ ವರ್ಷದ ಜೋಶ್, ಕುಣಿದು ಕುಪ್ಪಳಿಸಿದ ಯುವಜನತೆ