ಮಂಗಳೂರು: ಉಸಿರಾಟದ ಸಮಸ್ಯೆಯಿಂದ ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಮಹಿಳೆಯೋರ್ವರ ಬಂಗಾರದ ಕಿವಿಯೋಲೆ ನಾಪತ್ತೆಯಾಗಿದೆ ಎಂಬ ಆರೋಪ ಕೇಳಿಬಂದಿದೆ.
ಬಂಟ್ವಾಳ ತಾಲೂಕಿನ ಸರಪಾಡಿ ಗ್ರಾಮದ ಬೊಳ್ಳೂರು ನಿವಾಸಿ ಡೀಕಯ್ಯ ಪೂಜಾರಿ ತಮ್ಮ ತಾಯಿಯ ಬಂಗಾರದ ಕಿವಿಯೋಲೆ ನಾಪತ್ತೆಯಾಗಿದೆ ಎಂದು ದೂರಿದ್ದಾರೆ.
ಮೇ 5ರಂದು ಮಧ್ಯರಾತ್ರಿ 1.50ರ ವೇಳೆಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಆದರೆ ಅವರ ಮೃತದೇಹದಲ್ಲಿ ಕಿವಿಯೋಲೆ ಕಾಣುತ್ತಿಲ್ಲ. ಈ ಬಗ್ಗೆ ವೀಡಿಯೋದಲ್ಲಿ ಮಾತನಾಡಿರುವ ಡೀಕಯ್ಯ ಪೂಜಾರಿ, ಉಸಿರಾಟದ ತೊಂದರೆಯಿಂದ ಮಂಗಳೂರಿನ ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ದಾಖಲಾಗಿರುವ ನನ್ನ ತಾಯಿಯು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಆದರೆ ಅವರ ಮೃತದೇಹವನ್ನು ಆಸ್ಪತ್ರೆಯಲ್ಲಿ ನಮಗೆ ಹಸ್ತಾಂತರಿಸುವ ಸಂದರ್ಭದಲ್ಲಿ ತಾಯಿಯ ಮೃತದೇಹದಲ್ಲಿ ಕಿವಿಯೋಲೆ ನಾಪತ್ತೆಯಾಗಿದೆ.
ಈ ಬಗ್ಗೆ ವಿಚಾರಿಸಿದಾಗ ಮೃತದೇಹದ ಫೋಟೋ ತೆಗೆಯಬೇಕಿತ್ತು ಎಂದು ಆಸ್ಪತ್ರೆ ಸಿಬ್ಬಂದಿ ಉಡಾಫೆಯ ಮಾತುಗಳನ್ನಾಡಿದ್ದಾರೆ. ಅಲ್ಲದೆ ಆಸ್ಪತ್ರೆಯ ಡಿಎಂಒ ಡಾ.ಸದಾಶಿವ ಅವರಿಗೆ ಲಿಖಿತ ದೂರು ನೀಡಿದ್ದು, ಈವರೆಗೆ ಯಾವ ಉತ್ತರ ನಮಗೆ ದೊರಕಿಲ್ಲ ಎಂದಿದ್ದಾರೆ.