ಮಂಗಳೂರು: ನಗರದಲ್ಲಿ ಕಳೆದ ವರ್ಷದ ಡಿ.19ರಂದು ನಡೆದಿದ್ದ ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮ್ಯಾಜಿಸ್ಟೀರಿಯಲ್ ತನಿಖಾಧಿಕಾರಿ ಜಿ.ಜಗದೀಶ್ ವಿಚಾರಣೆಯಲ್ಲಿ 29 ಮಂದಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಮತ್ತು 6 ಮಂದಿ ಸಾರ್ವಜನಿಕರು ಖುದ್ದಾಗಿ ಹಾಜರಾಗಿ ವಿಡಿಯೋ ಸಿಡಿ, ಲಿಖಿತ ದಾಖಲೆಗಳ ಮೂಲಕ ಸಾಕ್ಷ್ಯಾಧಾರಗಳನ್ನು ಒದಗಿಸಿದರು.
ನಗರದ ಹಂಪನಕಟ್ಟೆಯಲ್ಲಿರುವ ಮಿನಿ ವಿಧಾನಸೌಧದಲ್ಲಿರುವ ಉಪ ವಿಭಾಗಾಧಿಕಾರಿ ನ್ಯಾಯಾಲಯದ ಸಭಾಂಗಣದಲ್ಲಿ ನಡೆದ ವಿಚಾರಣೆಯಲ್ಲಿ ಈ ಸಾಕ್ಷ್ಯಾಧಾರಗಳನ್ನು ಒದಗಿಸಿದ್ದಾರೆ. ಇನ್ನು ಪೊಲೀಸ್ ಅಧಿಕಾರಿಗಳು ಸೇರಿ 30 ಪೊಲೀಸ್ ಸಿಬ್ಬಂದಿಯ ಸಾಕ್ಷಿ ವಿಚಾರಣೆ ನಡೆಯಲಿದೆ. ಆ ಸಾಕ್ಷಿ ವಿಚಾರಣೆಯನ್ನು ಸೋಮವಾರದಂದು ನಡೆಸಲಾಗುವುದು. ಅದೇ ದಿನ ಡಿಸಿ, ಎಸಿ ಹಾಗೂ ಶವ ಮಹಜರು ನಡೆಸಿರುವ ವೈದ್ಯರನ್ನು ಸಾಕ್ಷಿ ವಿಚಾರಣೆಗೆ ಹಾಜರಾಗುವಂತೆ ಕೋರಲಾಗಿದೆ ಎಂದು ಮ್ಯಾಜಿಸ್ಟೀರಿಯಲ್ ತನಿಖಾಧಿಕಾರಿ ಜಿ.ಜಗದೀಶ್ ಹೇಳಿದರು.
ಆ ಬಳಿಕ ಸಾರ್ವಜನಿಕರಿಗೆ ಸಾಕ್ಷಿ ವಿಚಾರಣೆಗೆ ಹಾಜರಾಗಲು ಅಂತಿಮ ಅವಕಾಶ ನೀಡಲಾಗುವುದು. ಯಾವ ದಿನ ಹಾಜರಾಗಬೇಕೆಂದು ಸೋಮವಾರದಂದು ನಿರ್ಧರಿಸಲಾಗುವುದು. ಆ ಬಳಿಕ ಸಾಕ್ಷಿ ವಿಚಾರಣೆಯನ್ನು ಸ್ಥಗಿತಗೊಳಿಸಲಾಗುವುದು. ನಂತರ ದಾಖಲೆಗಳನ್ನು ಪರಿಶೀಲನೆ ನಡೆಸಿ ವರದಿಯನ್ನು ಸಿದ್ಧಪಡಿಸಲಾಗುತ್ತದೆ ಎಂದು ಜಿ.ಜಗದೀಶ್ ಮಾಹಿತಿ ನೀಡಿದರು.
ದಾಖಲೆಗಳ ಪರಿಶೀಲನೆ ಬಾಕಿ ಇರುವುದರಿಂದ ತನ್ನ ಬೇಡಿಕೆಯ ಮೇರೆಗೆ ಸರ್ಕಾರ ಪ್ರಕರಣದ ತನಿಖೆ ನಡೆಸಲು ಒಂದು ತಿಂಗಳು ಹೆಚ್ಚಿನ ಕಾಲಾವಕಾಶ ನೀಡಿದ್ದು, ಏಪ್ರಿಲ್ 23 ಅಂತಿಮ ಗಡುವು ನೀಡಿದೆ. ಈವರೆಗೆ ಒಟ್ಟು ಪೊಲೀಸ್ ಅಧಿಕಾರಿ, ಸಿಬ್ಬಂದಿ, ಸಾರ್ವಜನಿಕರು ಸೇರಿ 350ಕ್ಕೂ ಅಧಿಕ ಮಂದಿಯನ್ನು ವಿಚಾರಣೆ ನಡೆಸಲಾಗಿದೆ. ಹೈಕೋರ್ಟ್ನಲ್ಲಿ ಮೊನ್ನೆ ವಿಚಾರಣೆಗೆ ಬಂದಿದ್ದು, ಅದನ್ನು ಮುಂದಿನ ತಿಂಗಳು 21ಕ್ಕೆ ಮುಂದೂಡಲಾಗಿದೆ ಎಂದು ಮ್ಯಾಜಿಸ್ಟೀರಿಯಲ್ ತನಿಖಾಧಿಕಾರಿ ವಿವರಿಸಿದರು.
ಇನ್ನು ಸಾಕ್ಷಿ ವಿಚಾರಣೆಗೆ ಹಾಜರಾಗಿರುವ ವಿಕ್ಟಿಂ ಜಸ್ಟೀಸ್ ಫೋರಂ ಸಂಚಾಲಕ ಜಲೀಲ್ ಕೃಷ್ಣಾಪುರ ಮಾತನಾಡಿ, ಇಂದು ಆರು ಮಂದಿ ವಿಡಿಯೋ ದಾಖಲೆಗಳನ್ನು ಮ್ಯಾಜಿಸ್ಟೀರಿಯಲ್ ತನಿಖಾಧಿಕಾರಿಯವರ ಮುಂದೆ ಲಿಖಿತ ದಾಖಲೆಗಳೊಂದಿಗೆ ಹಾಜರುಪಡಿಸಿದ್ದೇವೆ. ನಾವು ಘಟನೆಯ ಪ್ರತ್ಯಕ್ಷದರ್ಶಿಗಳಾಗಿದ್ದು, ನಮ್ಮ ಕಣ್ಣ ಮುಂದೆಯೇ ಗೋಲಿಬಾರ್ ನಡೆದಿದೆ. ಅಲ್ಲದೆ ಎರಡೂ ತಂಡಗಳ ಮಧ್ಯೆ ಸಮಾಧಾನ ಮಾಡಲು ಬಹಳಷ್ಟು ಶ್ರಮ ಪಟ್ಟಿದ್ದೇವೆ. ಅಂದು ಯಾರು ದೃಶ್ಯಾವಳಿಗಳನ್ನು ಸೆರೆ ಹಿಡಿದಿದ್ದಾರೋ, ಅವರನ್ನು ಸಂಪರ್ಕಿಸಿ ಅವರಿಂದ ವಿಡಿಯೋಗಳನ್ನು ಸಂಗ್ರಹಿಸಿ ಅದನ್ನು ಇಂದು ಮ್ಯಾಜಿಸ್ಟೀರಿಯಲ್ ತನಿಖಾಧಿಕಾರಿಗಳ ಮುಂದೆ ಇರಿಸಿದ್ದೇವೆ ಎಂದರು.