ಕಡಬ: ಗ್ರಾಮೀಣ ಭಾಗದ ಮುಸ್ಲಿಂ ಯುವತಿಯೋರ್ವಳು ರಾಜ್ಯ ಪೊಲೀಸ್ ಇಲಾಖೆಯ ಸಬ್ಇನ್ಸ್ಪೆಕ್ಟರ್ ಹುದ್ದೆಯ ಪರೀಕ್ಷೆ ಬರೆದು 39ನೇ ರ‍್ಯಾಂಕ್‌ನಲ್ಲಿ ಆಯ್ಕೆಯಾಗಿದ್ದಾರೆ.
ಕಡಬ ತಾಲೂಕಿನ ಗ್ರಾಮೀಣ ಪ್ರದೇಶ ಕುಂತೂರು ಸಮೀಪದ ಕೋಚಕಟ್ಟೆಯ ನಿವಾಸಿ, ಕೃಷಿಕರಾಗಿರುವ ಇಸ್ಮಾಯಿಲ್ ಕೊಯ್ಯಾರ್ ಹಾಗೂ ಝುಬೈದಾ ಹೆಂತಾರು ದಂಪತಿಯ ನಾಲ್ವರು ಪುತ್ರಿಯರ ಪೈಕಿ ಕೊನೆಯವರಾದ ಬದ್ರುನಿಸಾ ಇದೀಗ ಪ್ರೊಬೇಷನರಿ ಪಿಎಸ್ಐ ಆಗಿ ಆಯ್ಕೆಯಾಗಿದ್ದು, ಗ್ರಾಮೀಣ ಭಾಗದಲ್ಲಿ ಕಲಿತು ಪಿಎಸ್ಐ ಪರೀಕ್ಷೆಯಲ್ಲಿ ಉನ್ನತ ಫಲಿತಾಂಶ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಬಗ್ಗೆ ಈಟಿವಿ ಭಾರತದ ಜೊತೆಗೆ ಮಾತನಾಡಿದ ಬದ್ರುನಿಸಾ ಅವರು, ಪಿಎಸ್ಐ ಆಗಿ ಆಯ್ಕೆಯಾಗಿರೋದಕ್ಕೆ ತುಂಬಾ ಸಂತೋಷವಾಗುತ್ತಿದೆ. ಅಪ್ಪ ಕೃಷಿಕರಾಗಿದ್ದು, ಅಮ್ಮ ಮನೆಕೆಲಸಗಳನ್ನು ನೋಡಿಕೊಳ್ಳುತ್ತಾರೆ. ಮೂವರು ಅಕ್ಕಂದಿರು ಇದ್ದಾರೆ. ಅಪ್ಪ ಅಮ್ಮ, ಅಕ್ಕಂದಿರು ಮತ್ತು ನಾನು ವ್ಯಾಸಾಂಗ ಮಾಡಿದ ಎಲ್ಲಾ ಶಾಲಾ ಗುರುಗಳ ಪೂರ್ಣ ಬೆಂಬಲದಿಂದ ಈ ಸಾಧನೆ ಸಾಧ್ಯವಾಗಿದೆ ಎಂದಿದ್ದಾರೆ.
ಈ ಕೆಲಸ ಕಷ್ಟವಲ್ಲವೇ? ಪೊಲೀಸ್ ಇಲಾಖೆಗೆ ಬರಲು ಇಚ್ಚಿಸುವ ಯುವತಿಯರಿಗೆ ಏನು ಹೇಳ ಬಯಸುತ್ತೀರಿ? ಮತ್ತು ಮದುವೆಯ ನಂತರದಲ್ಲಿ ಈ ಪಿಎಸ್ಐ ಕೆಲಸ ಮುಂದುವರೆಸುತ್ತೀರಾ? ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಯಾವುದೇ ಕೆಲಸಗಳೂ ಯಾರಿಗೂ ಸೀಮಿತವಲ್ಲ. ಎಲ್ಲಾ ಕ್ಷೇತ್ರದಲ್ಲೂ ಯುವತಿಯರು ಮುಂದೆ ಬರಬೇಕು,ಜೊತೆಗೆ ಪೋಷಕರ ಬೆಂಬಲ, ಕಠಿಣ ಪರಿಶ್ರಮ ಮತ್ತು ದೈವಾನುಗ್ರಹವು ಬೇಕು ಎಂದು ಹೇಳಿದರು.
ಮದುವೆಯ ಬಗ್ಗೆ ಈಗ ಚಿಂತಿಸಿಲ್ಲ, ಮದುವೆಯ ನಂತರದಲ್ಲಿ ಕೆಲಸಕ್ಕೆ ಕಳುಹಿಸುವ ಒಬ್ಬ ಪತಿ ಸಿಗಲಿ ಎಂದೂ ನೀವೂ ಪ್ರಾರ್ಥನೆ ಮಾಡಿ ಎಂದು ನಗುತ್ತಲೇ ಹೇಳಿದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಬದ್ರುನಿಸಾ ಅವರು ತನ್ನ ಪ್ರಾಥಮಿಕ ಶಿಕ್ಷಣವನ್ನು ಕುಂತೂರಿನ ಸರ್ಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತ್ತು ಪ್ರೌಢಶಾಲಾ ಶಿಕ್ಷಣವನ್ನು, ಸಂತ ಜಾರ್ಜ್ ಪ್ರೌಢಶಾಲೆ ಕುಂತೂರು ಪದವು ಹಾಗೂ ಪಿಯುಸಿ ಶಿಕ್ಷಣವನ್ನು ರಾಮಕುಂಜದ ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಮತ್ತು ಯುನಿವರ್ಸಿಟಿ ಆಫ್ ಅಗ್ರಿಕಲ್ಚರ್ ಸೈನ್ಸ್ ಆಫ್ ಗಾಂಧಿ ಕೃಷಿ ವಿಜ್ಞಾನ ಕೇಂದ್ರ ಬೆಂಗಳೂರಿನಲ್ಲಿ ಬಿಎಸ್ಸಿ ಕೃಷಿ ಪದವಿ ಪಡೆದಿದ್ದಾರೆ.