ಸುಳ್ಯ(ದಕ್ಷಿಣಕನ್ನಡ): ದಸರಾ ನವರಾತ್ರಿ ಸಮಯದಲ್ಲಿ ನಾಡಿನಾದ್ಯಂತ ಸಂಭ್ರಮದ ವಾತಾವರಣ ಇರುತ್ತದೆ. ಇದರಲ್ಲೂ ಮೈಸೂರಿನಲ್ಲಿ ಜಂಬೂ ಸವಾರಿ, ದೀಪಾಲಂಕಾರಗಳು ವಿಶೇಷವಾದರೆ, ದಕ್ಷಿಣಕನ್ನಡ ಜಿಲ್ಲೆಯಲ್ಲಿ ನವರಾತ್ರಿ ದಿನಗಳಲ್ಲಿ ಮಾರ್ನೆಮಿ ವೇಷಧಾರಿಗಳನ್ನು ನೋಡುವುದೇ ವಿಶೇಷವಾಗಿದೆ.
ತುಳು ಭಾಷೆಯಲ್ಲಿ ಮಾರ್ನೆಮಿ ಅಂದರೆ ಮಹಾನವಮಿ ಎಂಬ ಅರ್ಥವಿದೆ. ನವರಾತ್ರಿ ದಿನಗಳಲ್ಲಿ ಊರು - ಊರುಗಳಲ್ಲಿ ಡೊಳ್ಳು, ಬ್ಯಾಂಡ್ ಬಡಿಯುತ್ತಾ ಅಥವಾ ಯಾವುದೇ ವಾದ್ಯ ಇಲ್ಲದೇ ಮಾರ್ನೆಮಿ ವೇಷಧಾರಿಗಳು ಆಗಮಿಸುತ್ತಾರೆ.
ಮೈತುಂಬಾ ಬಣ್ಣ ಹಚ್ಚಿಕೊಂಡು ಹುಲಿ, ಕರಡಿ, ಸಿಂಹ ವೇಷ ಮತ್ತು ಇವುಗಳನ್ನು ನಕಲಿ ಕೋವಿ ಹಿಡಿದು ಕುಣಿಸುವ ಮತ್ತಿಬ್ಬರು ಬೇಟೆಗಾರರು, ಯಕ್ಷಗಾನದ, ಪ್ರೇತ-ಭೂತ,ಆನೆ ಸೇರಿದಂತೆ ಮೃಗಗಳ ವೇಷ, ಹಾಸ್ಯ ವಿದೂಷಕ ವೇಷ, ಹುಡುಗ-ಹುಡುಗಿಯ ವೇಷಗಳನ್ನು ತೊಟ್ಟ ವೇಷಧಾರಿಗಳು ಕಾಣಸಿಗುತ್ತಾರೆ. ಅದರಲ್ಲೂ ಈ ವರ್ಷ ವಿಶೇಷವಾಗಿ ಕೊರೊನಾಗೆ ಸಂಬಂಧಿಸಿದ ವೇಷಗಳು ಕಂಡು ಬಂದವು.
ಗಮನ ಸೆಳೆಯುವ ಹುಲಿವೇಷ:
ಹುಲಿವೇಷದ ತಂಡದಲ್ಲಿ ಸಾಮಾನ್ಯವಾಗಿ ಮೂರ್ನಾಲ್ಕು ಹುಲಿಗಳಾದರೂ ಇರುತ್ತವೆ. ಜೊತೆಗೆ ಹುಲಿಗಳನ್ನು ಬೇಟೆಯಾಡುವ ನಕಲಿ ಕೋವಿ ಹಿಡಿದ ಒಬ್ಬಾತ ಇರುತ್ತಾನೆ. ಹುಲಿವೇಷ ತೊಟ್ಟವರು ಡೊಳ್ಳಿನ ಹೊಡೆತಕ್ಕೆ ಲಯಬದ್ಧವಾಗಿ ಕುಣಿಯುತ್ತಾರೆ. ಹುಲಿಯಂತೆಯೇ ಪಟ್ಟೆ ಪಟ್ಟೆಯ ಬಣ್ಣ ಬಳಿದುಕೊಂಡಿರುತ್ತಾರೆ. ಈ ವೇಷಧಾರಿಗಳಿಗೆ ಹುಲಿಯ ದೇಹಭಾಷೆ, ಆಂಗಿಕ ಅಭಿನಯವೂ ಕರಗತವಾಗಿರುತ್ತದೆ.
ದೇವರ ಹರಕೆಗೆ ಸೀಮಿತವಾದ ಕೊರಗ ವೇಷ:
ಹುಲಿ ಕುಣಿತದಂತೆಯೇ ಕರಡಿ ವೇಷಧಾರಿಗಳಿದ್ದಾರೆ. ಇದರಲ್ಲಿಯೂ ಬೇಟೆಯಾಡುವವನು, ವಾದ್ಯದವರ ತಂಡ ಇರುತ್ತದೆ. ಮಾತ್ರವಲ್ಲದೇ ವಿವಿಧ ಯಕ್ಷಗಾನ ವೇಷಗಳು ಬೀದಿಯಲ್ಲೆಲ್ಲ ಸಾಗುತ್ತವೆ. ದಶಕದ ಹಿಂದೆ ಮೈಯೆಲ್ಲ ಕಪ್ಪು ಬಣ್ಣ ಬಳಿದು ಕೊಳಲನ್ನು ಊದುತ್ತಾ ಸಾಗುತ್ತಿದ್ದ ಕೊರಗ ವೇಷ ಇಂದು ಕೇವಲ ದೇವರ ಹರಕೆಗೆ ಮಾತ್ರ ಸೀಮಿತಗೊಂಡಿದೆ. ಇನ್ನು ಯಕ್ಷಗಾನ ವೇಷಗಳಾದರೆ ಶೂರ್ಪನಖಿ, ಮುರ್ಕುಂಡೆ, ಶುಂಭ ನಿಶುಂಭ ಮೊದಲಾದ ರಾಕ್ಷಸ ವೇಷಗಳೆ ಹೆಚ್ಚು. ದೇವರ ವೇಷಗಳನ್ನು ಹಾಕುವಂತಿಲ್ಲ ಎಂಬ ನಿಯಮವೂ ಇದೆ.
ಪ್ರತಿಫಲಾಪೇಕ್ಷೆ ಇಲ್ಲದೇ ಹರಕೆಗಾಗಿ ವೇಷಧಾರಣೆ:
ದೇವಸ್ಥಾನಗಳಿಂದ ಮಾರ್ನೆಮಿ ವೇಷಧಾರಿಗಳ ಮೊದಲ ಕುಣಿತ ಆರಂಭವಾಗುತ್ತದೆ. ನಂತರದಲ್ಲಿ ಹತ್ತು ದಿನಗಳ ಕುಣಿತದ ಕೊನೆಯಲ್ಲೂ ವೇಷ ಕಳಚುವ ಮುನ್ನಾ ಇರುವ ಕೊನೆಯ ಕುಣಿತವೂ ದೇವರ ಮುಂದೆಯೇ ನಡೆಯುತ್ತದೆ. ಯಾವುದೇ ಪ್ರತಿಫಲ ಇಲ್ಲದೆ ಹರಕೆಗಾಗಿ ವೇಷ ಹಾಕಿ ಕುಣಿಯುವವರೂ ಇದ್ದಾರೆ. ಕುಣಿತಕ್ಕೆ ಮೆಚ್ಚಿ ಜನರು ಕೊಟ್ಟ ಹಣದಲ್ಲಿ ಸ್ವಲ್ಪ ಭಾಗವನ್ನು ದೇವರಿಗೆ ಕಾಣಿಕೆ ಹಾಕಿ ಉಳಿದಿದ್ದನ್ನು ತಮಗಾಗಿ ಬಳಸುವುದು ನಡೆದುಕೊಂಡು ಬಂದಿರುವ ಪದ್ಧತಿ ಇದೆ.
ಈಗಿನ ಕಾಲದಲ್ಲಿ ಗೂಗಲ್, ಫೋನ್ ಪೇ ಪ್ರಸಿದ್ಧಿ ಪಡೆದ ಹಿನ್ನೆಲೆಯಲ್ಲಿ ಪೇಮೆಂಟ್‌ಗಾಗಿ ಕಾರ್ಡ್‌ಗಳನ್ನು ಹಿಡಿದು ತಿರುಗಾಡುವ ವೇಷಧಾರಿಗಳೂ ಕಾಣಸಿಗುತ್ತಾರೆ. ಇಂತಹದೊಂದು ದೃಶ್ಯವನ್ನು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ ರವಿ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಹಿಂದಿನ ಕಾಲದಲ್ಲಿ ಗ್ರಾಮಗಳಲ್ಲಿ ಮನೆಗಳಿಗೆ ಬರುತ್ತಿದ್ದ ವೇಷಧಾರಿಗಳು ಈಗಿನ ಕಾಲದಲ್ಲಿ ತಮ್ಮ ಕುಣಿತವನ್ನು ಪೇಟೆಗಳಿಗೆ ಸೀಮಿತ ಮಾಡಿದ್ದಾರೆ.
ಇದನ್ನೂ ಓದಿ: ನಂದಿಧ್ವಜ ಪೂಜೆ ನೆರವೇರಿಸಿ ಜಂಬೂ ಸವಾರಿಗೆ ಚಾಲನೆ ನೀಡಿದ ಸಿಎಂ ಬೊಮ್ಮಾಯಿ