ಬೆಳ್ತಂಗಡಿ: ಕೊರೊನಾ ಲಾಕ್ಡೌನ್ ಹಿನ್ನೆಲೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯಬೇಕಿದ್ದ ವಾರ್ಷಿಕ ವಿಷು ಮಾಸದ ಜಾತ್ರೆ ರದ್ದು ಮಾಡಲಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದೇವರ ಪ್ರಶ್ನೆ ಮೂಲಕ ನೋಡಿ ಧರ್ಮದೇವತೆಗಳ, ಅಣ್ಣಪ್ಪ ಸ್ವಾಮಿಯ ನೇಮ - ಕೋಲಗಳು, ಐದು ದಿನಗಳ ಕಾಲ ನಡೆಯಬೇಕಿದ್ದ ಮಂಜುನಾಥ ಸ್ವಾಮಿಯ ರಥೋತ್ಸವ, ಕಟ್ಟೆ ವಿಹಾರ, ಅವಭೃತ ವಿಹಾರವೂ ರದ್ದು ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಮುಂದಿನ ಸೂಚನೆಯವರೆಗೂ ಭಕ್ತರ ಪ್ರವೇಶ, ದರ್ಶನವೂ ರದ್ದು ಮಾಡಲಾಗಿದ್ದು, ಈ ಬಗ್ಗೆ ಭಕ್ತರು ಯಾರೂ ಸಂಕೋಚ ಪಡಬೇಕಾಗಿಲ್ಲ. ದೈವ, ದೇವರುಗಳು ಈ ರೀತಿಯ ಪರಿವರ್ತನೆಗೆ ಒಪ್ಪಿದ್ದಾರೆ. ಸಾಂಕೇತಿಕ ಸೇವೆಗಳಿಗೆ ಒಪ್ಪಿ ಅನುಗ್ರಹಿಸಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನು ಸರ್ಕಾರ ಸೂಚಿಸಿರುವ ಮಾರ್ಗಸೂಚಿಗಳನ್ನು ಪಾಲಿಸಿ, ಕೊರೊನಾ ಸೋಂಕು ಮುಕ್ತಿಗಾಗಿ ಪ್ರಾರ್ಥನೆ ಮಾಡಿ ಮುಂದಿನ ದಿನಗಳ ಸುಭೀಕ್ಷೆಗಾಗಿ ಸರ್ಕಾರದ ಆದೇಶವನ್ನು ಪರಿಪಾಲಿಸಿ ಎಂದು ಭಕ್ತರಿಗೆ ಡಾ. ಡಿ. ವೀರೇಂದ್ರ ಹೆಗ್ಗಡೆ ಕರೆ ನೀಡಿದ್ದಾರೆ.