ಪುತ್ತೂರು: ನಗರಸಭಾ ವ್ಯಾಪ್ತಿಯ ಜಿಡೆಕಲ್ಲು ಕಂಚಲಗುರಿ ರಸ್ತೆಯ ಪಕ್ಕದಲ್ಲೇ ಇರುವ ಕೆರೆಯೊಂದು ಅಪಾಯವನ್ನು ಆಹ್ವಾನಿಸುತ್ತಿದೆ.
ರಸ್ತೆಯ ಪಕ್ಕದಲ್ಲಿಯೇ ಇರುವ ಈ ಖಾಸಗಿ ಕೆರೆ, ವರ್ಷದಿಂದ ವರ್ಷಕ್ಕೆ ಅಗಲವಾಗುತ್ತಿದ್ದು, ರಸ್ತೆ ಕುಸಿಯುವ ಭೀತಿಯೂ ಉಂಟಾಗಿದೆ. ದಿನನಿತ್ಯ ನೂರಾರು ವಾಹನಗಳು ಓಡಾಟ ನಡೆಸುವ ಇಲ್ಲಿನ ಬೆದ್ರಾಳ- ಜಿಡೆಕಲ್ಲು ಸಂಪರ್ಕ ರಸ್ತೆಯ ಕಂಚಲಗುರಿ ಎಂಬಲ್ಲಿನ ಈ ಕೆರೆಗೆ ಯಾವುದೇ ತಡೆಗೋಡೆಗಳಿಲ್ಲ. ಈ ಭಾಗದಲ್ಲಿ ರಸ್ತೆ ತಿರುವು ಹೊಂದಿರುವ ಕಾರಣ ಸ್ವಲ್ಪ ಅಜಾಗರೂಕತೆಯಾದರೂ ವಾಹನಗಳು ಕೆರೆಗೆ ಬೀಳುವ ಅಪಾಯವಿದೆ. ಹಾಗಾಗಿ ಈ ಕೆರೆ ಇರುವ ರಸ್ತೆ ಪಕ್ಕ ಬಲಿಷ್ಠ ಕಾಂಕ್ರೀಟ್ ತಡೆಗೋಡೆ ನಿರ್ಮಾಣ ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಮಕ್ಕಳಿಗೂ ಅಪಾಯ...
ಕೆರೆಯ ಇನ್ನೊಂದು ಪಾರ್ಶ್ವದಲ್ಲಿ ಐದಾರು ಮನೆಗಳಿವೆ. ಈ ಮನೆಗಳಲ್ಲಿ ಪುಟ್ಟ ಪುಟ್ಟ ಮಕ್ಕಳಿದ್ದಾರೆ. ಆಟವಾಡುವ ವೇಳೆ ಮಕ್ಕಳಿಗೆ ಅಪಾಯ ಉಂಟಾಗುವ ಸಾಧ್ಯತೆ ಇದ್ದು, ಈ ಕೆರೆಯನ್ನು ಮುಚ್ಚಬೇಕೆಂಬುದು ಈ ಕುಟುಂಬಗಳ ಆಗ್ರಹವಾಗಿದೆ.
ಅಪಾಯದ ಸೂಚನಾ ಫಲಕ ಅಳವಡಿಸಲು ಒತ್ತಾಯ...
ರಸ್ತೆಗ ತಡೆಗೋಡೆ ನಿರ್ಮಾಣಕ್ಕೂ ಮೊದಲು ಇಲ್ಲೊಂದು ಅಪಾಯದ ಸೂಚನಾ ಫಲಕ ಅಗತ್ಯವಾಗಿ ಅಳವಡಿಸಬೇಕು. ನಂತರ ರಸ್ತೆ ಬದಿಯಿಂದ ಕಾಂಕ್ರೀಟ್ ತಡೆಗೋಡೆ ನಿರ್ಮಿಸಬೇಕು. ನಗರಸಭಾ ಅಧಿಕಾರಿಗಳು ಮೊದಲು ಎಚ್ಚೆತ್ತುಕೊಳ್ಳಬೇಕು ಎನ್ನುವುದು ಪುತ್ತೂರಿನ ಸಾಮಾಜಿಕ ಕಾರ್ಯಕರ್ತರಾದ ಲೋಕೇಶ್ ಗೌಡ ಅಲುಂಬುಡ ಅವರ ಅಭಿಪ್ರಾಯ.