ಕಡಬ (ದಕ್ಷಿಣ ಕನ್ನಡ) : ತಾಲೂಕಿನ ಕೊಯಿಲದಲ್ಲಿರುವ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ (ಕೊಯಿಲ ಫಾರ್ಮ್) ದಲ್ಲಿ ಮತ್ತೆ ಕಿಡಿಗೇಡಿಗಳ ಅಕ್ರಮ ಚಟುವಟಿಕೆಗಳು ಶುರುವಾಗಿದೆ.
ಕೊಯಿಲ ಫಾರ್ಮ್ಗೆ ಪ್ರವಾಸಿಗರು ಹಾಗೂ ಸಾರ್ವಜನಿಕರು ಅತಿಕ್ರಮಣ ಪ್ರವೇಶ ಮಾಡುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳು ಬಿತ್ತರವಾದ ಹಿನ್ನೆಲೆ, ಇಲ್ಲಿಗೆ ಪ್ರವೇಶ ನಿಷೇಧಿಸಿ ಬ್ಯಾನರ್ಗಳನ್ನು ಅಳವಡಿಸಲಾಗಿತ್ತು. ಈ ಬ್ಯಾನರ್ಗಳನ್ನು ಕಿಡಿಗೇಡಿಗಳು ಹರಿದು ಹಾಕಿದ್ದಾರೆ. ಕೊಯಿಲಾ ಫಾರ್ಮ್ ಸುತ್ತ 10 ಕಡೆಗಳಲ್ಲಿ ಎಚ್ಚರಿಕೆ ಬ್ಯಾನರ್ಗಳನ್ನು ಅಧಿಕಾರಿಗಳ ಸೂಚನೆಯ ಮೇರೆಗೆ ಸಿಬ್ಬಂದಿ ಅಳವಡಿಸಿದ್ದರು. ಆದರೆ, ಫಾರ್ಮ್ನ ಹಿಂಬದಿ ಗೇಟ್ ಬಳಿ ಹಾಕಲಾಗಿದ್ದ ಬ್ಯಾನರ್ನ್ನು ಹರಿದು ಹಾಕಲಾಗಿದೆ.
ಇದನ್ನೂ ಓದಿ: ಕೊಯಿಲ ಫಾರ್ಮ್ ಹೌಸ್ ಸಂಕಷ್ಟ: ಪ್ರವಾಸಿಗರ ಮೋಜು-ಮಸ್ತಿಯಿಂದ ಕಂಗೆಟ್ಟ ಸ್ಥಳೀಯರು
ಸಾರ್ವಜನಿಕರು ಹಾಗೂ ಪ್ರವಾಸಿಗರು ಫಾರ್ಮ್ ಒಳಗೆ ನುಗ್ಗಿ ಅಕ್ರಮ ಚಟುವಟಿಕೆಗಳಲ್ಲಿ ತೊಡಗುತ್ತಿದ್ದರು. ಅಲ್ಲದೆ ಕಸ-ಕಡ್ಡಿ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಎಸೆದು, ಪರಿಸರ ಹಾಳುಗೆಡವುತ್ತಿದ್ದರು. ಈ ಹಿಂದೆ ಪ್ಲಾಸ್ಟಿಕ್ ತ್ಯಾಜ್ಯ ತಿಂದು ಫಾರ್ಮ್ನಲ್ಲಿದ್ದ ಹಲವು ಜಾನುವಾರುಗಳು ಮೃತಪಟ್ಟಿದ್ದವು. ಆ ಸಮಯದಲ್ಲಿ ಸ್ವಲ್ಪ ಮಟ್ಟದಲ್ಲಿ ಸುರಕ್ಷತಾ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿತ್ತು. ನಂತರದ ದಿನಗಳಲ್ಲಿ ಮತ್ತೆ ಇಲ್ಲಿಗೆ ಬಂದ ಪ್ರವಾಸಿಗರು, ಪಾರ್ಟಿ, ಮೋಜು ಮಸ್ತಿ ಮಾಡುತ್ತಿದ್ದರು. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳು ಬಿತ್ತರವಾಗಿದ್ದವು. ಈ ಹಿನ್ನೆಲೆ ಫಾರ್ಮ್ ಒಳಗೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿತ್ತು. ಫಾರ್ಮ್ ರಸ್ತೆಯಲ್ಲಿ ಹಾದು ಹೋಗುವ ಪ್ರತಿಯೊಬ್ಬರ ವಿವರಗಳನ್ನು ದಾಖಲಿಸಿ ಒಳಗಡೆ ಬಿಡಲಾಗುತ್ತಿತ್ತು. ಅಲ್ಲದೆ, ಸಿಸಿ ಟಿವಿ ಕ್ಯಾಮರಾ ಅಳವಡಿಸಿ ಎಲ್ಲರ ಮೇಲೆ ಕಣ್ಣಿಡಲಾಗಿತ್ತು.
ಈ ನಡುವೆ ಫಾರ್ಮ್ ಪ್ರವೇಶ ನಿಷೇಧಿಸಿ ಹಾಕಲಾಗಿದ್ದ ಬ್ಯಾನರ್ ಹರಿದು ಹಾಕಲಾಗಿದ್ದು, ಫಾರ್ಮ್ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದಾರೆ ಎನ್ನಲಾಗ್ತಿದೆ.